ಮುಂಬಯಿ: ಬಾಲಿವುಡ್ ಡ್ರಗ್ ಪ್ರಕರಣವು ಖ್ಯಾತ ನಿರ್ಮಾಪಕ ಕರಣ್ ಜೋಹರ್‌ಗೂ ಉರುಳಾಗುವ ಲಕ್ಷಣ ಗೋಚರಿಸಿದೆ. ಈ ಹಿಂದೆ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿಯೊಂದಕ್ಕೆ ಸಂಬಂಧಿಸಿ ವೈರಲ್ ಆಗಿದ್ದ ವೀಡಿಯೋ ಕುರಿತಾದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಎನ್‌ಸಿಬಿ ಕೈಸೇರಿದೆ.
ವೀಡಿಯೋದ ಸತ್ಯಾಸತ್ಯತೆ ಅರಿಯುವ ಸಲುವಾಗಿ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ವರದಿ ಬಂದಿದ್ದು, ಈ ವೀಡಿಯೋ ತಿರುಚಿದ್ದಲ್ಲ. ಅದು ನೈಜ ವೀಡಿಯೋ ಎಂಬುದು ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯದಲ್ಲೇ ಎನ್‌ಸಿಬಿ ಅಧಿಕಾರಿಗಳು ಸಭೆ ನಡೆಸಿ, ಮುಂದಿನ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ. ಜೋಹರ್‌ರನ್ನು ತನಿಖೆಗೆ ಒಳಪಡಿಸುವ ಸಾಧ್ಯತೆಯೂ ಇದೆ. ಇದೇ ವೇಳೆ, ಪಾರ್ಟಿಯಲ್ಲಿ ಯಾರೂ ಯಾವುದೇ ಡ್ರಗ್ ಸೇವಿಸಿಲ್ಲ ಎಂದು ಕರಣ್ ಜೋಹರ್ ಸ್ಪಷ್ಟನೆ ನೀಡಿದ್ದಾರೆ.
ಅ.3ರವರೆಗೆ ವಶಕ್ಕೆ: ಡ್ರಗ್ ಪ್ರಕರಣ ಸಂಬಂಧ ಶನಿವಾರ ಬಂಧಿತರಾದ ಧರ್ಮ ಪ್ರೊಡಕ್ಷನ್ಸ್ ಕಾರ್ಯಕಾರಿ ನಿರ್ಮಾಪಕ ಕ್ಷಿತಿಜ್ ರವಿ ಪ್ರಸಾದ್‌ನನ್ನು ರವಿವಾರ ಮುಂಬೈ ನ್ಯಾಯಾಲಯ ಅ.3ರವರೆಗೆ ಎನ್‌ಸಿಬಿ ವಶಕ್ಕೆ ಒಪ್ಪಿಸಿದೆ. ಕ್ಷಿತಿಜ್ ಪ್ರಸಾದ್‌ಬಂಧಿತ ಆರೋಪಿ ಕರಂಜೀತ್ ಸಿಂಗ್ ಆನಂದ್ ಮತ್ತು ಸಹಚರರಿಂದ ಡ್ರಗ್ ಖರೀದಿಸುತ್ತಿದ್ದುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ಗಳೊಂದಿಗೂ ಈತ ನಂಟು ಹೊಂದಿದ್ದ.
ಇದನ್ನೂ ಓದಿ :ರಾಗಿಣಿ, ಸಂಜನಾ ಜಾಮೀನು ಅರ್ಜಿ ತಿರಸ್ಕಾರ: ನಟಿಯರ ಜೈಲುವಾಸ ಮುಂದುವರಿಕೆ
ಅಲ್ಲದೆ ಇತ್ತೀಚೆಗೆ ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದ ಅನೂಜ್ ಕೇಶ್ವಾನಿಯೊಂದಿಗೂ ಕ್ಷಿತಿಜ್ ಪರೋಕ್ಷ ಸಂಬಂಧ ಹೊಂದಿದ್ದ. ಹೀಗಾಗಿ, ಈತ ಬಾಲಿವುಡ್‌ನ ಯಾರಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಎಂಬ ಬಗ್ಗೆ ಇನ್ನಷ್ಟು ತನಿಖೆಯಾಗಬೇಕಿದೆ ಎಂದು ಕೋರ್ಟ್‌ಗೆ ಎನ್‌ಸಿಬಿ ತಿಳಿಸಿದೆ.
ಕಶ್ಯಪ್‌ರನ್ನೇಕೆ ಬಂಧಿಸಿಲ್ಲ?:
ಬಾಲಿವುಡ್ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್‌ರನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವ ನಟಿ ಪಾಯಲ್ ಘೋಷ್ ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ತಮಗೆ ನ್ಯಾಯ ದೊರಕದೇ ಹೋದರೆ ಉಪವಾಸ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ.