ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಾರು ಹುಣ್ಣಿಮೆ ನಿಮಿತ್ತ ಮಣ್ಣಿನ ಜೋಡೆತ್ತುಗಳ ಖರೀದಿ ಸಂಭ್ರಮ ಕಂಡು ಬಂದಿತು.
ಕಾರು ಹುಣ್ಣಿಮೆ ನಿಮಿತ್ತವಾಗಿ ಸ್ಥಳೀಯ ಹನುಮಾನ ದೇವಸ್ಥಾನ ಮತ್ತು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಸಮೀಪದ ಹೊಸೂರ ಗ್ರಾಮದ ಹದಿನೈದಕ್ಕೂ ಹೆಚ್ಚು ಕುಂಬಾರರರ ಕುಟುಂಬಗಳು ಮಣ್ಣಿನ ಬಸವಣ್ಣನ ಮೂರ್ತಿಗಳನ್ನು ಮಾಡಿ ಮಾರಾಟ ಮಾಡಿದರು. ಕಳೆದ ಕೆಲವು ತಿಂಗಳಿಂದ ವ್ಯಾಪಾರ ಇಲ್ಲದೇ ಕುಂಬಾರ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿದ್ದವು. ಇವತ್ತು ಎತ್ತಿನ ಮಾರಾಟ ಅವರ ಆರ್ಥಿಕತೆಗೆ ಸ್ವಲ್ಪ ಬಲ ನೀಡಿದಂತಾಗಿದೆ.
ಬೆಳಗ್ಗೆ ಆರು ಗಂಟೆಗೆ ಆರಂಭವಾದ ಬಸವಣ್ಣನ ಮೂರ್ತಿಗಳ ಮಾರಾಟ ಸಂಜೆಯವರೆಗೆ ನಡೆಯಿತು. ರೂ. 30 ರಿಂದ ರೂ.200 ವರೆಗೆ ಸುಂದರವಾದ ಬಸವಣ್ಣನ ವಿಗ್ರಹಗಳನ್ನು ಮಾರಾಟ ಮಾಡಿದರು.
ನಾಲ್ಕು ದಶಕಗಳಿಂದ ಬಸವಣ್ಣನ ಮೂರ್ತಿಗಳನ್ನು ತೊಡಗಿರುವ ಕಾಶವ್ವ ಕುಂಬಾರ: ಹೊಸೂರ ಗ್ರಾಮದ ಕಾಶವ್ವ ಕುಂಬಾರ ಅವರಿಗೆ ಸದ್ಯ ಎಂಬತ್ತರ ಅಶುಪಾಸಿನ ವಯಸ್ಸು. ಅವರು ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಬಸವಣ್ಣನ ವಿಗ್ರಹಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಮೊದಲಿಗಿಂತಲೂ ಈಗ ಹೆಚ್ಚು ಬಸವಣ್ಣನ ಮೂರ್ತಿಗಳನ್ನು ಜನರು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಆಧುನಿಕತೆಯ ಇಂದಿನ ದಿನಗಳಲ್ಲಿಯೂ ಕಾರು ಹುಣ್ಣಿಮೆಯ ಸಂದರ್ಭದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಬ್ಬಗಳು ಇಂದಿಗೂ ತನ್ನ ಮಹತ್ವವನ್ನು ಕಳೆದುಕೊಳ್ಳದೆ ಆಚರಣೆಯಲ್ಲಿರುವುದು ಮಹತ್ವದ ಸಂಗತಿಯಾಗಿದೆ.