ಬಾಗಲಕೋಟೆ: ಜಿಲ್ಲೆಯ ಮುಧೋಳ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ, ಬಿಜೆಪಿಯ ಹಿರಿಯ ದಲಿತ ನಾಯಕ ಗೋವಿಂದ ಕಾರಜೋಳರಿಗೆ ರಾಜ್ಯದ ಉಪ ಮುಖ್ಯಮಂತ್ರಿ ಸ್ಥಾನ ದೊರೆತಿದ್ದು, ಇದೀಗ ಜಿಲ್ಲೆಯ ಉಸ್ತುವಾರಿ ಸಚಿವರ ಹೊಣೆಯನ್ನೂ ವಹಿಸಲಾಗಿದೆ. ಹೀಗಾಗಿ ಕಾರಜೋಳರ ಎದುರು ಸಾಲು ಸಾಲು ಸವಾಲುಗಳಿದ್ದು, ಹೀಗಾಗಿ ಅವರು ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲಿ ಎಂಬುದು ಅವರ ಅಭಿಮಾನಿಗಳ ಒತ್ತಾಸೆ.
ಹಿಂದೆ ಇದೇ ಕಾರಜೋಳರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಭೀಕರ ಪ್ರವಾಹ ಎದುರಾಗಿತ್ತು. ಇದೀಗ ಅವರೇ ಉಸ್ತುವಾರಿಯಾಗಿದ್ದು, ಪುನಃ ದೊಡ್ಡ ಮಟ್ಟದ ಪ್ರವಾಹ ಬಂದಿದೆ. ಈ ಬಾರಿ ಬರೋಬ್ಬರಿ 195 ಹಳ್ಳಿಗಳು, ಅಕ್ಷರಶಃ ಮುಳುಗಿದ್ದು, ಜನರು ಪುನರ್ ಬದುಕು ಕಟ್ಟಿಕೊಳ್ಳಲು ಹೈರಾಣಾಗುತ್ತಿದ್ದಾರೆ. ಇದೆಲ್ಲದರ ಮಧ್ಯೆ ಹತ್ತು ಹಲವು ಸಮಸ್ಯೆಗಳಿಗೆ ಜಿಲ್ಲೆಯಲ್ಲಿವೆ. ಕನಿಷ್ಠ ಮೂಲ ಸೌಲಭ್ಯಗಳಿಲ್ಲದ ಆಸರೆ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಬೇಕಿದೆ. ನೆರೆ-ಬರದಿಂದ ನಲುಗಿದ ಜಿಲ್ಲೆಯ ಜನರ ಬದುಕು, ಮೇಲಕ್ಕೆತ್ತುವ ದೊಡ್ಡ ಹೊಣೆಗಾರಿಕೆ ಗೋವಿಂದ ಕಾರಜೋಳ ಅವರ ಮೇಲಿದೆ.
ಹೇಳಿದ್ದೇ ಮಾಡಿದರೆ ಸಾಕು: ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡಿ, ಒತ್ತಾಯಿಸುವುದು ಸರಳ. ಅಧಿಕಾರ ಸಿಕ್ಕಾಗ ಆ ಹೋರಾಟ-ಒತ್ತಾಯ ಮರೆಯದೇ, ತಾವೇ ಸರ್ಕಾರಕ್ಕೆ ಕೊಟ್ಟ ಸಲಹೆಯಂತೆ ನಡೆದುಕೊಳ್ಳಬೇಕು ಎಂಬುದು ಹಲವರ ಅಭಿಪ್ರಾಯ. ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಭೂಮಿ ಕಳೆದುಕೊಳ್ಳುವ ರೈತರಿಗೆ ಪ್ರತಿ ಎಕರೆ ನೀರಾವರಿಗೆ 40ಲಕ್ಷ, ಖುಷ್ಕಿ ಭೂಮಿಗೆ 25ಲಕ್ಷ ಪರಿಹಾರ ಕೊಡಬೇಕೆಂದು ಇದೇ ಕಾರಜೋಳರು ಡಿಸಿ ಕಚೇರಿ ಎದುರು ಹೋರಾಟ ಮಾಡಿದ್ದರು. ಆಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಖಂಡಿತಾ ನಾವು ರೈತರಿಗೆ ಈ ಪರಿಹಾರ ಕೊಡುತ್ತೇವೆಂದು ಹೇಳಿದ್ದರು.
ನೀವೇ ಹೇಳಿದ್ದು ನಡೆಸಿಕೊಡಿ: ಪ್ರಮುಖವಾಗಿ ಮಹದಾಯಿ ನದಿ ಜೋಡಣೆ ಯೋಜನೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಧ್ವನಿಯಲ್ಲಿ ಕೂಗಿದ್ದರು. ಈಗ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ವಿಳಂಬ ಮಾಡದೇ ಮಹದಾಯಿ ನದಿ ಜೋಡಣೆ ಕೈಗೊಂಡರೆ, ಬಾದಾಮಿ ತಾಲೂಕಿನ ಕುಡಿಯುವ ನೀರಿನ ಬವಣೆ ನೀಗುತ್ತದೆ ಎಂಬುದು ಹಲವರ ಅಭಿಪ್ರಾಯ.
98 ಗ್ರಾಮಸ್ಥರ ಕೈ ಬಿಡದಿರಿ: ಕಳೆದ ತಿಂಗಳು ಜಿಲ್ಲೆಗೆ ಅಪ್ಪಳಿಸಿದ ಪ್ರವಾಹದಿಂದ 195 ಗ್ರಾಮಗಳ ಜನರು, ತೀವ್ರ ಸಂಕಷ್ಟದಲ್ಲಿದ್ದಾರೆ. ಇದರಲ್ಲಿ 40 ಗ್ರಾಮಗಳು ಆಸರೆ ಯೋಜನೆಯಡಿ, 46 ಗ್ರಾಮಗಳು ಯುಕೆಪಿಯಡಿ ಹಾಗೂ 12 ಗ್ರಾಮಗಳು ನಾರಾಯಣಪುರ ಹಿನ್ನೀರಿನಡಿ ಪರಿಹಾರ ಪಡೆದ ಗ್ರಾಮಗಳಾಗಿವೆ. ಹೀಗಾಗಿ ನೆರೆ ಪೀಡಿತ 195 ಗ್ರಾಮಗಳಲ್ಲಿ ಈಗ ಮನೆ ಹಾನಿ ಅಥವಾ ಬೆಳೆ ಹಾನಿಗೆ ಪರಿಹಾರ ನೀಡಲು 98 ಗ್ರಾಮ ಕೈಬಿಡಲಾಗಿದೆ. ಒಂದು ವೇಳೆ ಕೈಬಿಟ್ಟರೆ, ಆ ಗ್ರಾಮಗಳ ಜನರ ಬದುಕು ಶೋಚನೀಯವಾಗಲಿದೆ. ಮಾನವೀಯ ನೆಲೆಯಲ್ಲಿ ಪ್ರವಾಹದಿಂದ ಹಾನಿಯಾದ ಎಲ್ಲಾ ಗ್ರಾಮಗಳ ಜನರಿಗೆ ಪರಿಹಾರ ನೀಡಿ, ಇನ್ನುಮುಂದೆ ಮುಳುಗಡೆ ಗ್ರಾಮಗಳಲ್ಲಿ ಜನರು ವಾಸಿಸಿದರೆ, ಮುಂದೆ ಯಾವುದೇ ಪ್ರವಾಹ ಅಥವಾ ಸರ್ಕಾರಿ ಸೌಲಭ್ಯಗಳನ್ನು ಅಂತಹ ಗ್ರಾಮಸ್ಥರಿಗೆ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಬೇಕಿದೆ. ಆಗ ಜನರು ಹೊಸ ಗ್ರಾಮಗಳತ್ತ ಮುಖ ಮಾಡುತ್ತಾರೆ. ಇಲ್ಲದಿದ್ದರೆ ನೆರೆ ಸಂತ್ರಸ್ತರು ನದಿ ಪ್ರವಾಹಕ್ಕೆ ಒಮ್ಮೆ ಮುಳುಗಿದರೆ, ಸರ್ಕಾರವೂ ಕೈ ಹಿಡಿಯದಿದ್ದರೆ ಅವರ ಬದುಕು ಮತ್ತೆ ಮುಳುಗಲಿದೆ ಎಂಬುದು ನೆರೆ ಸಂತ್ರಸ್ತರ ಅಳಲು.
•ಶ್ರೀಶೈಲ ಕೆ. ಬಿರಾದಾರ