Advertisement

ಇಬ್ಬನಿ ಕರಗಿತು! ಹನಿಹನಿ ಪ್ರೇಮ್‌ ಕಹಾನಿ

11:07 AM Mar 31, 2017 | |

“ನಿಮಗೆ ಕಥೆ ಇಷ್ಟ ಆಗದಿದ್ದರೆ, ಇನ್ನೂ ಹತ್ತು ಕಥೆ ಹೇಳುತ್ತೀನಿ. ಕೇಳುವಂತವರಾಗಿ …’ ಎಂದು ಚಾಲೆಂಜ್‌ ಮಾಡಿದ್ದರಂತೆ
ಹಂಸರಾಜ್‌. ಆದರೆ, ನಿರ್ದೇಶಕ ಕಂ ನಿರ್ಮಾಪಕ ಮದ್ದೂರು ಶಿವುಗೆ ಮೊದಲನೆಯ ಕಥೆಯೇ ಇಷ್ಟವಾಗಿ ಹೋಗಿದೆ. ಅವರು ಇದೇ ಸಾಕು ಎಂದು ಒಪ್ಪಿಕೊಂಡು, ಚಿತ್ರ ಮಾಡುವುದಕ್ಕೆ ಪ್ರಾರಂಭಿಸಿದ್ದಷ್ಟೇ ಅಲ್ಲ, ಈಗ ಆ ಚಿತ್ರವನ್ನು ಮುಗಿಸಿದ್ದೂ ಆಗಿದೆ. ಈ ಹಂತದಲ್ಲಿ ಮದ್ದೂರು ಶಿವು ಮಾಧ್ಯಮದವರೆದುರು ಬಂದು ಚಿತ್ರದ ಬಗ್ಗೆ ಮಾತಾಡಿದರು.

Advertisement

ಈ ಮದ್ದೂರು ಶಿವು, ನಿರ್ಮಾಪಕ ದೊಡ್ಮನೆ ವೆಂಕಟೇಶ್‌ ಅವರ ಬಾಮೈದ. ಚಿತ್ರ ಮಾಡುತ್ತೀನಿ ಎಂದಾಗ ಅವರು ನಿರ್ದೇಶಕ ಶಶಾಂಕರ್‌ ರಾಜ್‌ ಅವರ ಮಾರ್ಗದರ್ಶನ ಪಡೆದುಕೋ ಎಂದರಂತೆ. ಹಾಗಾಗಿ ಶಶಾಂಕ್‌ ರಾಜ್‌ ಈ ಚಿತ್ರದ ಮಾರ್ಗದರ್ಶಕ ಪಟ್ಟದಲ್ಲಿದ್ದಾರೆ. ಇನ್ನು ಶಶಾಂಕ್‌ ರಾಜ್‌ ತಂಡದ ಛಾಯಾಗ್ರಾಹಕ ನಾಗೇಶ್ವರ ರಾವ್‌ ಮತ್ತು ಸಂಗೀತ ನಿರ್ದೇಶಕ ಇಂದ್ರಸೇನಾ ಇಲ್ಲೂ ಮುಂದುವರೆದಿದ್ದಾರೆ. ಹಾಗಾಗಿ ಮದ್ದೂರು ಶಿವು ಜೊತೆಗೆ ಅವರೆಲ್ಲಾ ವೇದಿಕೆ ಮೇಲೆ ಕುಳಿತಿದ್ದರು.

ಮೊದಲಿಗೆ ಮಾತಾಡಿದ್ದು ಶಿವು. “ಚಿತ್ರದ ಚಿತ್ರೀಕರಣ ಮುಗಿದಿದೆ. ಇದೊಂದು ಲವ್‌ ಸ್ಟೋರಿ. ಫ್ಯಾಮಿಲಿ ಹಿನ್ನೆಲೆ ಇದೆ. ಇಡೀ ಕುಟುಂಬ
ಕೂತು ನೋಡಬಹುದಾದ ಚಿತ್ರವಿದು. ಬೆಂಗಳೂರಿನ ಸುತ್ತಮುತ್ತ ಎರಡು ಹಂತದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಮಾಡಿದ್ದರ ತೃಪ್ತಿ ಇದೆ. ಇಲ್ಲಿ ನಾಯಕಿಯ ಹೆಸರು ಹನಿ. ಇಬ್ಬರು ನಾಯಕರಿದ್ದಾರೆ’ ಎಂದರು.

ಶಿವು ಬಿಟ್ಟಿದ್ದನ್ನು ಹಂಸರಾಜ್‌ ಮುಂದುವರೆಸಿದರು. “ಇದೊಂದು ಭಾವನೆಗಳ ಸಂಘರ್ಷವಿರುವ ಚಿತ್ರ. ತ್ರಿಕೋನ ಪ್ರೇಮಕಥೆ ಇದೆ.
ಆಕಾಶ ಮತ್ತು ಭೂಮಿಯ ಮಧ್ಯೆ ಪ್ರಕೃತಿ ಇದೆ. ಆ ಪ್ರಕೃತಿ ಯಾರಿಗೆ ಸಲ್ಲಬೇಕು. ಆಕಾಶಕ್ಕೋ ಅಥವಾ ಭೂಮಿಗೋ. ಅವರಿಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದೇ ಚಿತ್ರದ ಕಥೆ. ಸುಮಾರು ಎರಡು ವರ್ಷಗಳ ಹಿಂದೆ ಬರೆದ ಕಥೆ ಇದು. ಇಷ್ಟು ಬೇಗ ಸಿನಿಮಾ ಆಗಬಹುದು ಎಂದು ನಾನು ಭಾವಿಸಿರಲಿಲ್ಲ’ ಎಂದರು ಹಂಸರಾಜ್‌. ಈ ಚಿತ್ರದಲ್ಲಿ ಎಂ.ಪಿ. ಜಯರಾಜ್‌ ಅವರ ಮಗ ಜಯರಾಜ್‌ ಮತ್ತು ತೆಲುಗು ನಟ ಮನೋಜ್‌ ನಂದಮ್‌ ನಾಯಕರಾಗಿ ಅಭಿನಯಿಸಿದ್ದಾರೆ. ಅವರಿಗೆ ನಾಯಕಿಯಾಗಿ ದೀಪ್ತಿ ಕಾಪ್ಸೆ ಇದ್ದರೆ, ಜೊತೆಗೆ ನಿರೀಕ್ಷಾ ಆಳ್ವಾ, ನೆ.ಲ. ನರೇಂದ್ರ ಬಾಬು, ಉಮೇಶ್‌, ಆನಂದ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next