Advertisement

ಭಾವೈಕ್ಯತೆ ಸಮಾಗಮದ ಬೆಂಗಳೂರು ಕರಗಕ್ಕೆ ಇಂದು ಚಾಲನೆ

12:13 PM Apr 08, 2022 | Team Udayavani |

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಎರಡು ವರ್ಷ ದೇವಾಲಯಕ್ಕೆ ಮಾತ್ರ ಸೀಮಿತವಾಗಿದ್ದ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಶುಕ್ರವಾರದಿಂದ (ಏಪ್ರಿಲ್‌ 8) ಆರಂಭವಾಗಲಿದ್ದು, ಏ.16ರ ವರೆಗೂ ನಡೆಯಲಿದೆ. ಕರಗ ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಕರಗ ಮೆರವಣಿಗೆ ಸಾಗುವ ಬೀದಿಗಳಲ್ಲಿ ಬೀದಿ ದೀಪಗಳಿಗೆ ಹೊಸ ಹೊಳಪು ನೀಡಲಾಗಿದೆ.

Advertisement

ದೇವಸ್ಥಾನವನ್ನು ಸುಣ್ಣ ಬಣ್ಣಗಳಿಂದ ಆಲಂಕೃತಗೊಳಿಸಲಾಗಿದೆ. ಜತೆಗೆ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಪಾಲಿಕೆಯ ದಕ್ಷಿಣ ವಿಭಾಗ ಜಂಟಿ ಆಯುಕ್ತ ಜಗದೀಶ್‌ ನಾಯ್ಕ ಹೇಳಿದ್ದಾರೆ. ಧರ್ಮರಾಯ ಸ್ವಾಮಿ ದೇವಸ್ಥಾನ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮೊಬೈಲ್‌ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜ್ಞಾನೇಂದ್ರ ಅವರು ಈ ಬಾರಿ ಕೂಡ ಕರಗ ಹೊರಲಿದ್ದಾರೆ. ಅವರು ಕರಗ ಹೊರುತ್ತಿರುವುದು ಇದು 12ನೇ ಬಾರಿಯಾಗಿದೆ. ಇದಕ್ಕಾಗಿಯೇ ಜ್ಞಾನೇಂದ್ರ ಅವರು ಸುಮಾರು ಆರು ತಿಂಗಳಿಂದ ತಯಾರಿ ನಡೆಸಿದ್ದಾರೆ. ಗರಡಿ ಮನೆಯಲ್ಲಿ ವ್ಯಾಯಾಮ ಸೇರಿದಂತೆ ಮತ್ತಿತರರ ತಾಲೀಮು ನಡೆಸಿದ್ದಾರೆ ಎಂದು ಜ್ಞಾನೇಂದ್ರ ಅವರ ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶುಕ್ರವಾರ ರಾತ್ರಿ 10ಗಂಟೆಗೆ ರಥೋತ್ಸವ ಮತ್ತು ಬೆಳಗಿನ ಜಾವ 3ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಏ.14ಕ್ಕೆ ಹಸಿ ಕರಗ ಮತ್ತು ಏ.16ರಂದು ಕರಗ ಶಕ್ತೋತ್ಸವ ಮತ್ತು ಧರ್ಮರಾಯ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.

Advertisement

ಈ ಬಾರಿಯೂ ಮಸ್ತಾನ್‌ ಸಾಬ್‌ ದರ್ಗಾಕ್ಕೆ ಕರಗ ಭೇಟಿ
ಬೆಂಗಳೂರು ಕರಗ ಭಾವೈಕ್ಯತೆ ಸಮಾಗಮದ ಹಬ್ಬವಾಗಿದೆ. ಹಿಂದೂ-ಮುಸಲ್ಮಾನರ ಭಾವೈಕ್ಯತೆಯ ಸಂಕೇತದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮ ಗುರುಗಳು ಧರ್ಮರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಕರಗ ಉತ್ಸವ ಸಮಿತಿ ಸದಸ್ಯರನ್ನು ಭೇಟಿಯಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಕರಗ ಮಸ್ತಾನ್‌ ಸಾಬ್‌ ದರ್ಗಾಕ್ಕೆ ಭೇಟಿ ನೀಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕರಗ ಉತ್ಸವ ಸಮಿತಿಯ ಕರಗ ಮಸ್ತಾನ್‌ ಸಾಬ್‌ ದರ್ಗಾಕ್ಕೆ ತೆರಳುವುದಕ್ಕೆ ಸಮ್ಮತಿ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್‌ ಸದಸ್ಯ ಪಿ.ಆರ್‌. ರಮೇಶ್‌, ಕೆಲವರು ಭಾವೈಕ್ಯತೆ ಸಾರುವ ಕರಗಕ್ಕೆ ಧರ್ಮದ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾವುದೇ ರೀತಿಯ ಅವಕಾಶವಿಲ್ಲ. ಬೆಂಗಳೂರು ಕರಗ ಎಂದರೆ ಅದು ಭಾವೈಕ್ಯತೆ ಸಾರುವ ಕರಗ ಎಂದೇ ಹೆಸರುವಾಸಿ. ಇಲ್ಲಿ ಹಿಂದೂ,ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಎಲ್ಲ ಧರ್ಮಿಯರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next