Advertisement

ಶ್ರದ್ಧಾಭಕ್ತಿಯ ದ್ರೌಪದಮ್ಮ ಹೂವಿನ ಕರಗ

11:05 AM May 11, 2019 | Team Udayavani |

ಮಾಸ್ತಿ: ಗ್ರಾಮದಲ್ಲಿ ಗುರುವಾರ ರಾತ್ರಿ ಪ್ರಸಿದ್ಧ ಧರ್ಮರಾಯ, ದ್ರೌಪದಮ್ಮ ಹೂವಿನ ಕರಗ ಮಹೋತ್ಸವ ಸಾವಿರಾರು ಭಕ್ತ ಸಮೂಹದ ನಡುವೆ ಶ್ರದ್ಧಾಭಕ್ತಿಯಿಂದ ನೆರವೇರಿತು.

Advertisement

ಗ್ರಾಮದಲ್ಲಿ 35 ವರ್ಷಗಳಿಂದ ವಹ್ನಿಕುಲ ಕ್ಷತ್ರಿಯ ಸಮಾಜದವರು ಕರಗ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದು, ಪ್ರತಿ ವರ್ಷದಂತೆ ದೇವಾಲಯ ಜೀರ್ಣೋದ್ಧಾರ ಸಂಘದಿಂದ ಗುರುವಾರ ಮಧ್ಯ ರಾತ್ರಿ 12.30 ರಿಂದ ಶುಕ್ರವಾರ ಬೆಳಗ್ಗೆ 10 ಗಂಟೆವರೆಗೂ ಹೂವಿನ ಕರಗ ಮಹೋತ್ಸವ ನಡೆಯಿತು.

ಗುರುವಾರ ರಾತ್ರಿ ಹಲಗು ಸೇವೆ ಮುಗಿದ ನಂತರ ರಾತ್ರಿ ನಡೆದ ಕರಗಕ್ಕೆ ಸುಗಂಧ ಬೀರುವ ಮಲ್ಲಿಗೆ ಹೂವುಗಳಿಂದ ಸಿಂಗರಿಸಲಾಗಿತ್ತು. ಕರಗದ ಪೂಜಾರಿ ನಾರಾಯಣಸ್ವಾಮಿ ಕರಗ ಹೊತ್ತು ಮಧ್ಯರಾತ್ರಿ 12.30ಕ್ಕೆ ದೇವಾಲಯದಿಂದ ಮೊಣಕಾಲಿನಲ್ಲೇ ಕುಣಿಯುತ್ತಾ ಹೊರ ಬಂದರು. ಕರಗ ಹೊತ್ತ ಪೂಜಾರಿ ಬಲಗೈನಲ್ಲಿ ಕತ್ತಿ, ಎಡಗೈನಲ್ಲಿ ದಂಡ ಹಿಡಿದು, ಪೂಜಾರಿ ಗಂಟೆ ಸದ್ದು, ವೀರ ಕುಮಾರರ ಗೋವಿಂದ-ಗೋವಿಂದ ಎಂಬ ನಾಮಸ್ಮರಣೆ, ತಮಟೆ, ಮಂಗಳ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.

ಮಲ್ಲಿಗೆ ಹೂ ಚೆಲ್ಲಿ ಸ್ವಾಗತ: ಕರಗದ ಪ್ರಯುಕ್ತ ಗ್ರಾಮದ ಮಹಿಳೆಯರು ತಮ್ಮ ಮನೆಯ ಅಂಗಳವನ್ನು ನೀರಿನಿಂದ ಸ್ವಚ್ಛಗೊಳಿಸಿ ಬಣ್ಣ ಬಣ್ಣಗಳಿಂದ ರಂಗೋಲಿ ಬಿಡಿಸಿ ಕರಗವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಕರಗಕ್ಕೆ ಮಲ್ಲಿಗೆ ಹೂವುಗಳನ್ನು ಚೆಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು.

ತಮಿಳುನಾಡಿನಿಂದ ಭಕ್ತರು ಆಗಮನ: ಗ್ರಾಮದಲ್ಲಿ ಪ್ರತಿ ಮನೆಗಳಿಗೂ ತೆರಳಿ ಪೂಜೆ, ಮುಡಿಪು ಸ್ವೀಕರಿಸಿದ ಕರಗ ಪೂಜಾರಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ದೇವಾಲಯ ಪ್ರದಕ್ಷಣೆ ಹಾಕಿ, ಅಗ್ನಿಕುಂಡ ಪ್ರವೇಶಿಸಿದ ನಂತರ ದೇವಾಲಯ ಸೇರಿತು. ನಂತರ ವೀರಕುಮಾರರು ಅರಿಶಿಣ ನೀರನ್ನು ಎರಚಿಕೊಳ್ಳುವ ಮೂಲಕ ವಸಂತೋತ್ಸವ ಆಚರಿಸಿಕೊಂಡರು. ಕರಗ ವೀಕ್ಷಿಸಲು ಜಿಲ್ಲೆ, ನೆರೆಯ ತಮಿಳುನಾಡಿನ ಹಲವು ಗ್ರಾಮಗಳಿಂದ ಸಾವಿರಾರು ಮಂದಿ ಆಗಮಿಸಿದ್ದರು.

Advertisement

ಹಲಗು ಸೇವೆ: ಕರಗದ ಪ್ರಯುಕ್ತ ಮಾಸ್ತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಲಗು ಸೇವೆ ನಡೆಯಿತು. ಪೋತುಲ ರಾಜನ ವೀರಾ ವೇಷ ಹಾಗೂ ವೀರಕುಮಾರರು ಕತ್ತಿಗಳಿಂದ ತಮ್ಮ ಎದೆಗೆ ಹೊಡೆದುಕೊಳ್ಳುವುದು ಮೈ ನವಿರೇಳುವಂತೆ ಮಾಡಿತು.

ಶಾಸಕ ಕೆ.ವೈ.ನಂಜೇಗೌಡ, ಜಿಪಂ ಸದಸ್ಯ ಎಚ್.ವಿ.ಶ್ರೀನಿವಾಸ್‌ ಕರಗ ಹೊತ್ತ ನಾರಾಯಣಸ್ವಾಮಿಗೆ ಚಿನ್ನದ ಉಂಗುರ ಕೊಡುಗೆ ನೀಡಿದರು. ರಾಜ್ಯ ತಿಗಳ ಸಮಾಜದ ಸಂಘದ ಖಜಾಂಜಿ ಹೂಡಿ ವಿಜಯ್‌ಕುಮಾರ್‌, ಜಿಲ್ಲಾಧ್ಯಕ್ಷ ಉದಯ್‌ಕುಮಾರ್‌, ಗೌರವಾಧ್ಯಕ್ಷ ಎಂ.ಪಲ್ಲವಿ ಮಣಿ, ಕಾರ್ಯದರ್ಶಿ ಪಾಲ್ಗುಣ, ವಹ್ನಿಕುಲ ಕ್ಷತ್ರಿಯ ಸಂಘದ ಅಧ್ಯಕ್ಷ ಜಯರಾಜ್‌, ತಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿ.ಮುನಿಯಪ್ಪ, ಪುರಸಭಾ ಸದಸ್ಯ ಲಕ್ಷ್ಮೀನಾರಾಯಣ್‌, ಕೆಡಿಪಿ ಸದಸ್ಯ ವಿಜಯನರಸಿಂಹ, ಮುಖಂಡ ಆರ್‌.ಪ್ರಭಾಕರ್‌, ದೇವಾಲಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಂ.ಎನ್‌.ಪೆರುಮಾಳಪ್ಪ, ಉಪಾಧ್ಯಕ್ಷ ಈರಪ್ಪ, ಖಜಾಂಚಿ ಎಂ.ಸಿ.ವಿ.ಚಂದ್ರಪ್ಪ, ಕಾರ್ಯದರ್ಶಿಗಳಾದ ಎಂ.ನಾರಾಯಣಸ್ವಾಮಿ, ರಾಮಚಂದ್ರ, ಕುಲದ ಗೌಡರಾದ ಅಬ್ಬಪ್ಪ, ಮಂಜುನಾಥ್‌, ಯಜಮಾನ ವೆಂಕಟೇಶಪ್ಪ, ಕೋಲ್ಕಾರ್‌ ಗೋವಿಂದಪ್ಪ, ಭಾರತ ಪೂಜಾರಿ ಮುನಿಸ್ವಾಮಿ, ಗ್ರಾಪಂ ಅಧ್ಯಕ್ಷೆ ಸುಗುಣಮ್ಮ ಶ್ರೀನಿವಾಸ್‌, ಉಪಾಧ್ಯಕ್ಷ ಎಚ್.ವಿ.ಸತೀಶ್‌, ಸದಸ್ಯರು, ಹೋಬಳಿ, ತಾಲೂಕಿನ ಮುಖಂಡರು, ವಹ್ನಿಕುಲಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next