ಕಾಸರಗೋಡು: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೆàರ್ ಕೋ-ಆಪರೇಟಿವ್ ಸೊಸೈಟಿಯ ಸೆಕ್ರೆಟರಿ, ಸಿಪಿಎಂ ಲೋಕಲ್ ಕಮಿಟಿ ಸದಸ್ಯ ರತೀಶನ್ ಲಪಟಾಯಿಸಿ ಕೇರಳ ಬ್ಯಾಂಕ್‌ನಲ್ಲಿ ಅಡವಿರಿಸಿದ 48.5 ಲಕ್ಷ ರೂ. ಚಿನ್ನವನ್ನು ಕ್ರೈಂ ಬ್ರಾಂಚ್ ವಶಪಡಿಸಿಕೊಂಡಿದೆ.
ಈ ವಂಚನೆಗೆ ಸಂಬಂಧಿಸಿ ಬಂಧಿತ ಆರೋಪಿಗಳನ್ನು ಕರೆದೊಯ್ದು ಕೇರಳ ಬ್ಯಾಂಕ್‌ನ ಕಾಂಞಂಗಾಡ್ ಶಾಖೆಯಲ್ಲಿ ನಡೆಸಿದ ಮಾಹಿತಿ ಸಂಗ್ರಹ ವೇಳೆ ಅಡವಿರಿಸಿದ ಚಿನ್ನವನ್ನು ವಶಪಡಿಸಲಾಯಿತು.
ಸೊಸೈಟಿಯಿಂದ ಹಣ ಲಪಟಾಯಿಸಲು ಒತ್ತಾಸೆಗೈದ ಆರೋಪದಂತೆ ಪೊಲೀಸರು ಬಂಧಿಸಿದ ಪಳ್ಳಿಕೆರೆ ಪಂಚಾಯತ್ ಸದಸ್ಯ ಬೇಕಲ ಹದ್ದಾದ್ ನಗರದ ಕೆ.ಅಹಮ್ಮದ್ ಬಶೀರ್, ಪರಕ್ಲಾಯಿ ಏಳನೇ ಮೈಲಿನ ಎ. ಅಬ್ದುಲ್ ಗಫೂರ್, ಕಾಂಞಂಗಾಡ್ ನೆಲ್ಲಿಕ್ಕಾಡ್‌ನ ಎ. ಅನಿಲ್ ಕುಮಾರ್‌ನನ್ನು ನ್ಯಾಯಾಲಯ ಕ್ರೈಂಬ್ರಾಂಚ್ ಕಸ್ಟಡಿಗೆ ಬಿಟ್ಟು ಕೊಟ್ಟಿದೆ. ಡಿವೈಎಸ್‌ಪಿ ಶಿಬು ಪಾಪಚ್ಚನ್ ನೇತೃತ್ವದಲ್ಲಿ ತನಿಖೆಗೊಳಪಡಿಸಿದ ಬಳಿಕ ಕೇರಳ ಬ್ಯಾಂಕ್‌ನ ಕಾಂಞಂಗಾಡ್ ಶಾಖೆಯಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲಿ ಅನಿಲ್ ಕುಮಾರ್ ಮತ್ತು ಅಬ್ದುಲ್ ಗಫೂರ್ ಹೆಸರಿನಲ್ಲಿ ಚಿನ್ನವನ್ನು ಅಡವಿರಿಸಲಾಗಿತ್ತು.
ಕೇರಳ ಬ್ಯಾಂಕ್‌ನ ಪೆರಿಯಾ ಶಾಖೆಯಲ್ಲಿ ಅಬ್ದುಲ್ ಗಫೂರ್ ಹೆಸರಿನಲ್ಲಿ ಅಡವಿರಿಸಿದ 17 ಲಕ್ಷ ರೂ. ಮೌಲ್ಯದ ಚಿನ್ನವನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗುವುದು. ಕೆನರಾ ಬ್ಯಾಂಕ್‌ನ ಪಳ್ಳಿಕೆರೆ, ಪೆರಿಯ ಶಾಖೆಗಳಲ್ಲಿ ಅಹಮ್ಮದ್ ಬಶೀರ್‌ನ ಹೆಸರಿನಲ್ಲಿ 49 ಲಕ್ಷ ರೂ. ಮೌಲ್ಯದ ಚಿನ್ನ ಅಡವಿರಿಸಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಸಂಬಂಧಿಕನ ಹೆಸರಿನಲ್ಲೂ ಅಡಮಾನ 8 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನವನ್ನು ಆರೋಪಿ ಅನಿಲ್ ಕುಮಾರ್‌ನ ಸಂಬಂಧಿಕನ ಹೆಸರಲ್ಲೂ ಅಡವಿರಿಸಲಾಗಿದೆ. ಚಿನ್ನ ಅಡವಿರಿಸಿ ಲಭಿಸಿದ ಎಲ್ಲ ಮೊತ್ತವನ್ನು ರತೀಶನ್ ಪಡೆದುಕೊಂಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.
ಆರೋಪಿ ರತೀಶನ್ ತಲೆಮರೆಸಿಕೊಂಡಿದ್ದಾನೆ. ಬ್ಯಾಂಕ್‌ನಲ್ಲಿ ಒಟ್ಟು 4.76 ಕೋಟಿ ರೂ. ವಂಚನೆ ನಡೆದಿರುವುದಾಗಿ ದೂರಲಾಗಿದೆ. ಸೂತ್ರಧಾರ ಕಣ್ಣೂರು ನಿವಾಸಿ ಜಬ್ಟಾರ್ ತಲೆಮರೆಸಿಕೊಂಡಿದ್ದಾನೆ.