ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯ ವಿಶ್ವವಿದ್ಯಾಲಯದ ಆವರಣದೊಳಗೆ ಮಂಗಳವಾರ ಮಹಿಳಾ ಆತ್ಮಹತ್ಯಾ ಬಾಂಬರ್ ದಾಳಿಗೆ ಮೂವರು ಚೀನಾ ಮಹಿಳೆಯರು ಸೇರಿ ನಾಲ್ವರು ಸಾವನ್ನಪ್ಪಿದ್ದರು. ಈ ದಾಳಿಗೆ ಪ್ರತ್ಯೇಕತಾವಾದಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ(ಬಿಎಲ್ ಎ) ಹೊಣೆ ಹೊತ್ತುಕೊಂಡಿದೆ. ಈ ನಟೋರಿಯಸ್ ಮಹಿಳಾ ಆತ್ಮಾಹುತಿ ಬಾಂಬರ್ ಯಾರು? ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಕೂಡಾ ಎಲ್ ಟಿಟಿಇ ಮಾದರಿ ಅನುಸರಿಸಲು ಮುಂದಾಗಿದೆಯೇ ಎಂಬ ಕಿರು ಚಿತ್ರಣ ಇಲ್ಲಿದೆ.
ಸಿಸಿಟಿವಿ ಫೂಟೇಜ್ ನಲ್ಲಿ ವಿವಿ ಆವರಣದೊಳಗೆ ನಿಲ್ಲಿಸಿದ್ದ ವ್ಯಾನ್ ಬಳಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಬಂದು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಳು. ತಮ್ಮ ಸಂಘಟನೆಯ ಮೊದಲ ಮಹಿಳಾ ಆತ್ಮಾಹುತಿ ಬಾಂಬರ್ ಎಸಗಿದ ಕೃತ್ಯ ಇದಾಗಿದೆ ಎಂದು ಬಲೂಚಿ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ.
ಯಾರೀಕೆ ಸೂಸೈಡ್ ಬಾಂಬರ್ ಶಾರಿ ಬಲೂಚ್:
ಮಹಿಳಾ ಸೂಸೈಡ್ ಬಾಂಬರ್ ಅನ್ನು ಶಾರಿ ಬಲೂಚ್ ಅಲಿಯಾಸ್ ಬ್ರಾಂಶ್ ಎಂದು ಗುರುತಿಸಲಾಗಿದೆ. ಅಫ್ಘಾನ್ ಪತ್ರಕರ್ತ ಬಶೀರ್ ಅಹ್ಮದ್ ಗ್ವಾಖ್ ಪ್ರಕಾರ, ಶಾರಿ ಬಲೂಚ್ ಎಂಬ 30 ವರ್ಷದ ಮಹಿಳೆ ಪ್ರಾಣಿಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಹಾಗೂ ಎಂಫಿಲ್ ನಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದು ಶಾಲಾ ಶಿಕ್ಷಕಿಯಾಗಿದ್ದಳು. ಶಾರಿ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದರು. ಈಕೆಯ ಗಂಡ ದಂತವೈದ್ಯ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು. ಶಾರಿ ಕುಟುಂಬ ಉತ್ತಮ ಶಿಕ್ಷಣ ಪಡೆದಿದ್ದು, ಯಾವುದೇ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಇರಲಿಲ್ಲವಾಗಿತ್ತು. ಆದರೆ ಎರಡು ವರ್ಷಗಳ ಹಿಂದೆ ಶಾರಿ ಬಲೂಚ್ ಈ ಪ್ರತ್ಯೇಕತಾವಾದಿ ಸಂಘಟನೆಗೆ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದಾರೆ.
ಶಾರಿ ಬಲೂಚ್ ಆತ್ಮಾಹುತಿಯಿಂದ ಬಲೂಚ್ ಪ್ರತಿರೋಧದ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದೆ ಎಂದು ಬಿಎಲ್ ಎ ಹೇಳಿಕೊಂಡಿದೆ. ಶಾರಿ ವಿದ್ಯಾರ್ಥಿಯಾಗಿದ್ದಾಗ ಬಲೂಚ್ ವಿದ್ಯಾರ್ಥಿ ಸಂಘಟನೆಯ ಸದಸ್ಯಳಾಗಿದ್ದಳು ಹಾಗೂ ಈಕೆಗೆ ಬಲೂಚ್ ನರಮೇಧದ ಬಗ್ಗೆ ತಿಳಿದಿತ್ತು. ಶಾರಿ ಎಂಬ ವಿದ್ಯಾವಂತ ಮಹಿಳೆ ಆತ್ಮಾಹುತಿ ದಾಳಿಯಲ್ಲಿ ಭಾಗಿಯಾಗಿರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಬಿಎಲ್ ಎ ತಿಳಿಸಿದೆ.
ಪ್ರತ್ಯೇಕ ಬಲೂಚಿಸ್ತಾನ್ ಹೋರಾಟ:
ಪಾಕಿಸ್ತಾನದಿಂದ ಬಲೂಚಿಸ್ತಾನ್ ಪ್ರತ್ಯೇಕವಾಗಬೇಕೆಂದು ದೀರ್ಘಕಾಲದಿಂದ ಹೋರಾಟ ನಡೆಯುತ್ತಿದೆ. ಅಷ್ಟೇ ಅಲ್ಲ ಚೀನಾ ಕೂಡಾ ಇಲ್ಲಿ ಒನ್ ಬೆಲ್ಟ್, ಒನ್ ರೋಡ್ ಯೋಜನೆಗಾಗಿ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿದೆ. ಬಲೂಚಿಸ್ತಾನದ ಬಹುತೇಕ ಪ್ರದೇಶ ಪಾಕಿಸ್ತಾನದ ಪ್ರಾಂತ್ಯದಲ್ಲಿದೆ. ಇಲ್ಲಿ ಅತೀ ಕಡಿಮೆ ಪ್ರಮಾಣದ ಅಭಿವೃದ್ಧಿಯಾಗಿದ್ದು, ಒಟ್ಟು ಜನಸಂಖ್ಯೆ ಕೂಡಾ ಕಡಿಮೆ ಪ್ರಮಾಣದಲ್ಲಿದೆ. ಬಿಎಲ್ ಎ ಬಲೂಚಿಸ್ತಾನದ ಹೊರಗಿನಿಂದ ಕಾರ್ಯಾಚರಿಸುತ್ತಿದೆ. ಬಿಎಲ್ ಎ ಇಸ್ಲಾಮಾಬಾದ್ ವಿರುದ್ಧ ಹೋರಾಟಕ್ಕಿಳಿದಿದ್ದರು ಕೂಡಾ ಸಣ್ಣ ಪ್ರಮಾಣದ ಪ್ರತಿರೋಧ ತೋರಿಸುತ್ತಿತ್ತು. ಏತನ್ಮಧ್ಯೆ ಪಾಕಿಸ್ತಾನ ಬಲೂಚಿ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆಗೈದು ಹತ್ತಿಕ್ಕುವ ಕೆಲಸ ಮಾಡಿತ್ತು. ಇದೀಗ ಚೀನಾ ಪ್ರಜೆಗಳ ಹತ್ಯೆಯ ನಂತರ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಚೀನಾ ಎಚ್ಚರಿಕೆಯ ಸಂದೇಶ ರವಾನಿಸಿದೆ.