ಕರಾಚಿ: ಮೊದಲೇ ಆರ್ಥಿಕ ಸಂಕಷ್ಟದಿಂದ ನಲುಗಿರುವ ಪಾಕಿಸ್ಥಾನದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದೆ. ಕರಾಚಿಯ ಪೊಲೀಸ್ ಠಾಣೆಗೆ ಶಸ್ತ್ರಸಜ್ಜಿತ ಪೊಲೀಸರ ಗುಂಪೊಂದು ನುಗ್ಗಿದ್ದು, ಭೀಕರ ಗುಂಡಿನ ಕಾಳಗ ನಡೆದಿದೆ.
ಶುಕ್ರವಾರ ಸಂಜೆ ಆರಂಭವಾದ ಈ ಗುಂಡಿನ ದಾಳಿಯಲ್ಲಿ ಐವರು ಉಗ್ರರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಶಸ್ತ್ರಸಜ್ಜಿತ 12ಕ್ಕೂ ಅಧಿಕ ಮಂದಿ ಉಗ್ರರು ಶುಕ್ರವಾರ ಸಂಜೆ 6.30ಕ್ಕೆ ಕರಾಚಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ನುಗ್ಗಿದ್ದಾರೆ. ಪೊಲೀಸ್ ಸಮವಸ್ತ್ರ ಧರಿಸಿ ಅವರು ಕಚೇರಿಗೆ ನುಗ್ಗಿದ್ದಾರೆ.
ಇದನ್ನೂ ಓದಿ:ವನಿತಾ ಟಿ20 ವಿಶ್ವಕಪ್: ಅಗ್ರಸ್ಥಾನಕ್ಕೆ ಭಾರತ-ಇಂಗ್ಲೆಂಡ್ ಸ್ಪರ್ಧೆ
ತೆಹ್ರಿಕ್ ಎ ತಾಲಿಬಾನ್ (ಪಾಕಿಸ್ಥಾನಿ) ಉಗ್ರ ಸಂಘಟನೆ ಈ ದಾಳಿ ನಡೆಸಿದೆ. ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸ್ ಪೇದೆಗಳು, ರೇಂಜರ್ ಸಿಬ್ಬಂದಿ ಮತ್ತು ನಾಗರಿಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಭದ್ರತಾ ಅಧಿಕಾರಿಗಳು ಐದು ಅಂತಸ್ತಿನ ಕಟ್ಟಡವನ್ನು ತೆರವುಗೊಳಿಸಲು ಪ್ರಯತ್ನಿಸಿದಾಗ, ಪೊಲೀಸ್ ಮುಖ್ಯಸ್ಥರ ಕಚೇರಿಯ ಒಳಗಿನಿಂದ ಸ್ಫೋಟಗಳು ಕೇಳಿಬಂದವು. ಪ್ರಬಲ ಸ್ಫೋಟದಿಂದಾಗಿ ಸಮೀಪದ ಕಟ್ಟಡಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ. ಸದ್ಯ ಪೊಲೀಸ್ ಆಯುಕ್ತರ ಕಚೇರಿಯು ಭದ್ರತಾ ಪಡೆಗಳ ನಿಯಂತ್ರಣದಲ್ಲಿದೆ.