Advertisement

ಪಿಎಸ್‌ಎಲ್‌: ಕರಾಚಿ ಕಿಂಗ್ಸ್‌ಗೆ ಮೊದಲ ಕಿರೀಟ

10:14 PM Nov 18, 2020 | mahesh |

ಕರಾಚಿ: ಕರಾಚಿ ಕಿಂಗ್ಸ್‌ ಮೊದಲ ಬಾರಿಗೆ “ಪಾಕಿಸ್ಥಾನ್‌ ಸೂಪರ್‌ ಲೀಗ್‌’ (ಪಿಎಸ್‌ಎಲ್‌) ಚಾಂಪಿಯನ್‌ ಆಗಿ ಮೂಡಿಬಂದಿದೆ. ಪ್ರಶಸ್ತಿ ಹಣಾಹಣಿಯಲ್ಲಿ ಅದು ಲಾಹೋರ್‌ ಖಲಂದರ್ ವಿರುದ್ಧ 5 ವಿಕೆಟ್‌ ಜಯ ದಾಖಲಿಸಿತು.

Advertisement

ಇಲ್ಲಿನ “ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಲಾಹೋರ್‌ ಖಲಂದರ್ 7 ವಿಕೆಟಿಗೆ 134 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿದರೆ, ಕರಾಚಿ ಕಿಂಗ್ಸ್‌ 18.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 135 ರನ್‌ ಬಾರಿಸಿತು.

ಚಾಂಪಿಯನ್‌ ತಂಡದ ಪರ ಆರಂಭಕಾರ ಬಾಬರ್‌ ಆಜಂ ಅಜೇಯ 63 ರನ್‌ ಬಾರಿಸಿ ತಂಡವನ್ನು ಸುರಕ್ಷಿತವಾಗಿ ದಡ ಮುಟ್ಟಿಸಿದರು (49 ಎಸೆತ, 7 ಬೌಂಡರಿ). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿಗಳೆರಡೂ ಬಾಬರ್‌ ಪಾಲಾದವು.

ಲಾಹೋರ್‌ ಖಲಂದರ್ ತಂಡದ ಆರಂಭ ಉತ್ತಮವಾಗಿಯೇ ಇತ್ತು. ತಮಿಮ್‌ ಇಕ್ಬಾಲ್‌ (35) ಮತ್ತು ಫ‌ಕಾರ್‌ ಜಮಾನ್‌ (27) 10.1 ಓವರ್‌ ಜತೆಯಾಟ ನಡೆಸಿ 68 ರನ್‌ ಪೇರಿಸಿದರು. ಆದರೆ ಇವರಿಬ್ಬರು ಒಂದೇ ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರುವುದರೊಂದಿಗೆ ಕರಾಚಿ ಬೌಲರ್ ಕೈ ಮೇಲಾಯಿತು. ವಕಾಸ್‌ ಮಕ್ಸೂದ್‌, ಅರ್ಶದ್‌ ಇಕ್ಬಾಲ್‌ ಮತ್ತು ಉಮೈದ್‌ ಆಸಿಫ್ ತಲಾ 2 ವಿಕೆಟ್‌ ಉರುಳಿಸಿದರು.

ಫೈನಲ್‌ನಲ್ಲಿ ಸಿಡಿದದ್ದು 2 ಸಿಕ್ಸರ್‌ ಮಾತ್ರ. ಎರಡೂ ಲಾಹೋರ್‌ ಇನ್ನಿಂಗ್ಸ್‌ನಲ್ಲೇ ಕಂಡುಬಂದವು. ಇದು 5ನೇ ಪಿಎಸ್‌ಎಲ್‌ ಲೀಗ್‌ ಆಗಿದ್ದು, ಇಸ್ಲಾಮಾಬಾದ್‌ ಯುನೈಟೆಡ್‌ 2 ಸಲ, ಪೇಶಾವರ್‌ ಝಲಿ ಮತ್ತು ಕ್ವೆಟ್ಟಾ ಗ್ಲೆàಡಿಯೇಟರ್ ತಲಾ ಒಮ್ಮೆ ಚಾಂಪಿಯನ್‌ ಆಗಿವೆ. ಈ ಬಾರಿ 7 ತಿಂಗಳ ಕೊರೊನಾ ಬ್ರೇಕ್‌ ಬಳಿಕ ಪಂದ್ಯಾವಳಿ ಕಳೆದ ವಾರ ಪುನರಾರಂಭಗೊಂಡಿತ್ತು.

Advertisement

ಡೀನ್‌ ಜೋನ್ಸ್‌ ಗೆ ಅರ್ಪಣೆ
ಈ ಟ್ರೋಫಿಯನ್ನು ಅಗಲಿದ ಕ್ರಿಕೆಟಿಗ ಡೀನ್‌ ಜೋನ್ಸ್‌ ಅವರಿಗೆ ಅರ್ಪಿಸುತ್ತಿದ್ದೇವೆ ಎಂಬುದಾಗಿ ಕರಾಚಿ ಕಿಂಗ್ಸ್‌ ತಂಡದ ಕೋಚ್‌ ವಾಸಿಂ ಅಕ್ರಮ್‌ ಹೇಳಿದ್ದಾರೆ.
ಕೊರೊನಾ ಹಬ್ಬುವ ಮೊದಲು, ಕಳೆದ ಮಾರ್ಚ್‌ ನಲ್ಲಿ ಡೀನ್‌ ಜೋನ್ಸ್‌ ಕರಾಚಿ ಕಿಂಗ್ಸ್‌ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು. ಆದರೆ ಐಪಿಎಲ್‌ ಕಮೆಂಟ್ರಿಗಾಗಿ ಮುಂಬಯಿಗೆ ಆಗಮಿಸಿದ ವೇಳೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.
“ಕರಾಚಿ ಕಿಂಗ್ಸ್‌, ದಿ ಚಾಂಪಿಯನ್ಸ್‌. ಈ ಗೆಲುವು ಡೀನ್‌ ಜೋನ್ಸ್‌ ಮತ್ತು ತಂಡದ ಅಭಿಮಾನಿಗಳಿಗೆ ಅರ್ಪಣೆ’ ಎಂಬುದಾಗಿ ಅಕ್ರಮ್‌ ಹೇಳಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಲಾಹೋರ್‌ ಖಲಂದರ್-7 ವಿಕೆಟಿಗೆ 134 (ತಮಿಮ್‌ 35, ಫ‌ಕಾರ್‌ 27, ವೀಸ್‌ ಔಟಾಗದೆ 14, ಮಕ್ಸೂದ್‌ 18ಕ್ಕೆ 2, ಆಸಿಫ್ 18ಕ್ಕೆ 2, ಅರ್ಶದ್‌ 26ಕ್ಕೆ 2). ಕರಾಚಿ ಕಿಂಗ್ಸ್‌-18.4 ಓವರ್‌ಗಳಲ್ಲಿ 5 ವಿಕೆಟಿಗೆ 135 (ಬಾಬರ್‌ ಔಟಾಗದೆ 63, ಚಾಡ್ವಿಕ್‌ 22, ದಿಲ್ಬರ್‌ 28ಕ್ಕೆ 2, ರವೂಫ್ 30ಕ್ಕೆ 2).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ; ಬಾಬರ್‌ ಆಜಂ.

Advertisement

Udayavani is now on Telegram. Click here to join our channel and stay updated with the latest news.

Next