ನಿರ್ದೇಶಕ ದಯಾಳ್, ಕಳೆದ ತಿಂಗಳು “ಕರಾಳ ರಾತ್ರಿ’ ಮತ್ತು “ಪುಟ 109′ ಎಂಬ ಎರಡು ಚಿತ್ರಗಳನ್ನು ಒಟ್ಟಿಗೇ ಶುರು ಮಾಡಿದ್ದು ಗೊತ್ತಿರಬಹುದು. ಈ ಪೈಕಿ “ಕರಾಳ ರಾತ್ರಿ’ ಚಿತ್ರದ ಚಿತ್ರೀಕರಣವನ್ನು ಅವರು ಸದ್ದಿಲ್ಲದೆ ಶುರು ಮಾಡಿದ್ದು, ಮೂಡಿಗೆರೆಯಲ್ಲಿ ಕೆಲವು ದಿನಗಳಿಂದ ಸತತ ಚಿತ್ರೀಕರಣವಾಗುತ್ತಿದೆ. ಮೋಹನ್ ಹಬ್ಬು ಅವರ ನಾಟಕವನ್ನಾಧರಿಸಿ ದಯಾಳ್ “ಕರಾಳ ರಾತ್ರಿ’ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಂತೆ.
“ಇದು ಕ್ರೈಮ್ ಥ್ರಿಲ್ಲರ್ ಸಿನಿಮಾ. ಚಿತ್ರದ ಕಥೆ 1980ಯಲ್ಲಿ ನಡೆಯುತ್ತದೆ. ಕ್ರೈಮ್ ಥ್ರಿಲ್ಲರ್ ಎಂದಾಕ್ಷಣ ಒಂದು ಫಾರ್ಮುಲಾ ಇರುತ್ತದೆ. ಬಹುತೇಕ ಸಿನಿಮಾಗಳು ಆ ಫಾರ್ಮುಲಾದ ಮೇಲೆಯೇ ಸಾಗುತ್ತದೆ. ಆದರೆ, “ಕರಾಳ ರಾತ್ರಿ’ಯಲ್ಲಿ ಆ ಫಾರ್ಮುಲಾವನ್ನು ಬಿಟ್ಟು ಹೊಸದನ್ನು ಪ್ರಯತ್ನಿಸುತ್ತಿದ್ದೇನೆ. ಚಿತ್ರದಲ್ಲಿ ಭಾವನೆಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. ಎಮೋಶನ್ ಜೊತೆಗೆ ಸಾಗುವ ಕ್ರೈಮ್ ಥ್ರಿಲ್ಲರ್ ಸಿನಿಮಾವಿದು.
“ಹಗ್ಗದ ಕೊನೆ’ ತರಹನೇ ಈ ಸಿನಿಮಾ ಕೂಡಾ ಒಳ್ಳೆಯ ಹೆಸರು ತಂದುಕೊಡುತ್ತದೆ ಎಂಬ ವಿಶ್ವಾಸವಿದೆ’ ಎನ್ನುವುದು ದಯಾಳ್ ಮಾತು. ಚಿತ್ರದ ಬಹುತೇಕ ಚಿತ್ರೀಕರಣ ಮೂಡಿಗೆರೆಯ ಬಳಿಯ ಮನೆಯೊಂದರಲ್ಲಿ ನಡೆಯಲಿದ್ದು, ಸಿನಿಮಾಕ್ಕಾಗಿಯೇ ಆ ಮನೆಯನ್ನು ನವೀಕರಣ ಮಾಡಿದೆ ಚಿತ್ರತಂಡ. ಶೇ. 70ರಷ್ಟು ಚಿತ್ರೀಕರಣ ಆ ಮನೆಯಲ್ಲೇ ನಡೆಯುತ್ತದೆಯಂತೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಾಹಿತ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವ ಹಾಡಂತೆ. “ತಂಗಾಳಿ’ ನಾಗರಾಜ್ ಅವರು ಹಾಡು ಬರೆದಿದ್ದಾರೆ.
ಚಿತ್ರದ ಹಾಡೊಂದರ ಆರಂಭದಲ್ಲಿ ಡಿವಿಜಿಯವರ “ಮಂಕುತಿಮ್ಮನ ಕಗ್ಗ’ದ ನಾಲ್ಕು ಸಾಲು ಬರಲಿದ್ದು, ಉಳಿದಂತೆ ಅದಕ್ಕೆ ಹೊಂದುವ ರೀತಿ ನಾಗರಾಜ್ ಅವರು ಬರೆದಿದ್ದಾರೆ. ಈ ಚಿತ್ರದ ನಿರ್ಮಾಣದಲ್ಲಿ ದಯಾಳ್‌ಗೆ ಅವಿನಾಶ್ ಅವರು ಸಾಥ್ ನೀಡುತ್ತಿದ್ದಾರೆ. ಚಿತ್ರದಲ್ಲಿ ಜೆಕೆ, ಅನುಪಮಾ ಗೌಡ, ವೀಣಾ ಸುಂದರ್, ಸಿಹಿಕಹಿ ಚಂದ್ರು ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಇದೆ. ಗಣೇಶ್ ನಾರಾಯಣ್ ಸಂಗೀತ, ಪಿಕೆಎಚ್ ದಾಸ್ ಛಾಯಾಗ್ರಹಣ ಚಿತ್ರಕ್ಕಿದೆ.