Advertisement

ಕಾರ ಹುಣ್ಣಿಮೆ; ಮಣ್ಣಿನ ಎತ್ತುಗಳ ಪೂಜೆಯ ಸಂಭ್ರಮ; ಕನ್ನಡದ ಮೊದಲ ಮಣ್ಣಿನ ಹಬ್ಬ ಕಾರಹುಣ್ಣಿಮೆ

03:02 PM Jun 21, 2024 | Team Udayavani |

ರಬಕವಿ-ಬನಹಟ್ಟಿ: ಮುಂಗಾರು ಆರಂಭದ ಮೊದಲ ಹಬ್ಬವಾಗಿರುವ ಕಾರ ಹುಣ್ಣಿಮೆಯು ಹಬ್ಬಗಳನ್ನು ಕರೆದುಕೊಂಡು ಬರುವ ಹಬ್ಬವಾಗಿದೆ ಎಂದು ಗ್ರಾಮೀಣ ಪ್ರದೇಶದ ಜನರ ಮಾತು. ಇಲ್ಲಿಂದಲೇ ನಮ್ಮ ಹಬ್ಬಗಳು ಆರಂಭವಾಗುತ್ತವೆ. ಇಂದು ಶುಕ್ರವಾರ ರಬಕವಿ-ಬನಹಟ್ಟಿಯಲ್ಲಿ ಕಾರ ಹುಣ್ಣಿಮೆ ನಿಮಿತ್ತ ಮಣ್ಣಿನ ಎತ್ತುಗಳ ಖರೀದಿ ಹಾಗೂ ಪೂಜೆಯ ಸಂಭ್ರಮ ನಡೆಯಿತು.

Advertisement

ಕನ್ನಡದ ಮೊದಲ ಮಣ್ಣಿನ ಹಬ್ಬ ಕಾರಹುಣ್ಣಿಮೆ. ಈ ಸಂದರ್ಭದಲ್ಲಿ ಮಣ್ಣಿಗೆ ವಿಶೇಷ ಪೂಜೆಯನ್ನು ಅರ್ಪಿಸಲಾಗುತ್ತದೆ. ಜೊತೆಗೆ ಎತ್ತುಗಳನ್ನು ಅಲಂಕಾರ ಮಾಡಿ ಪೂಜಿಸುವ ಸಂಪ್ರದಾಯ ಈಗಲೂ ಆಚರಣೆಯಲ್ಲಿದೆ.

ಮುಂಬರುವ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಚೆನ್ನಾಗಿ ನಡೆಯಲಿ ಎಂಬುದು ರೈತರ ಬಯಕೆ ಮತ್ತು ಸಂಕಲ್ಪ. ಆ ನಿಮಿತ್ತವಾಗಿ ರೈತರು ಕಾಲಕ್ಕೆ ತಕ್ಕಂತೆ ಒಂದು ವರ್ಷದಲ್ಲಿ ಒಟ್ಟು ಐದು ಸಲ ಮಣ್ಣಿಗೆ ಪೂಜೆ ಸಲ್ಲಿಸುತ್ತಾರೆ.

ಮೊದಲು ಕಾರಹುಣ್ಣಿಮೆ ಸಂದರ್ಭದಲ್ಲಿ ಎತ್ತುಗಳ ಪೂಜೆ, ಮಣ್ಣೆತ್ತಿನ ಅಮವಾಸ್ಯೆ ಸಂದರ್ಭದಲ್ಲಿ ಗುಳ್ಳವನ ಪೂಜೆ. ಶ್ರಾವಣದಲ್ಲಿ ನಾಗಪೂಜೆ, ಭಾದ್ರಪದದಲ್ಲಿ ಗಣಪತಿ ಮತ್ತು ಗೌರಿ ಹೀಗೆ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯಾಗಿ ಮಣ್ಣಿಗೆ ಪೂಜೆ ಸಲ್ಲಿಸಲಾಗುತ್ತದೆ.

ಮನೆಗಳಲ್ಲಿ ಎತ್ತು ಇಲ್ಲದವರು ಕೂಡಾ ಕುಂಬಾರರು ಮಾಡಿದ ಮಣ್ಣಿನ ಎತ್ತುಗಳನ್ನು ತಂದು ಮನೆಯ ದೇವರ ಕೋಣೆಯ ಜಗಲಿಯ ಮೇಲೆ ಇಟ್ಟು ಅವುಗಳನ್ನು ಪೂಜಿಸುತ್ತಾರೆ. ನಂತರ ಅವುಗಳಿಗೆ ಕೋಡು ಬಳೆಗಳನ್ನು ಮಾಡಿ ಹಾಕುತ್ತಾರೆ.

Advertisement

ಇದೊಂದು ರೀತಿಯಲ್ಲಿ ಎತ್ತುಗಳ ಅಲಂಕಾರವಾಗಿದ್ದು, ಅಂತೆಯೇ ಕಾರ ಹುಣ್ಣಿಮೆಯೂ ರೈತನ ಮಿತ್ರ ಎತ್ತುಗಳನ್ನು ಪೂಜಿಸಿ ಗೌರವಿಸುವ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಎಲ್ಲ ಎತ್ತುಗಳನ್ನು ಬಣ್ಣ ಹಾಗೂ ಹೊಸ ಹೊಸ ಮೂಗುಧಾರ, ಬಾರುಕೋಲುಗಳಿಂದ ಶೃಂಗರಿಸಿ ಸಂಭ್ರಮಪಡುತ್ತಾರೆ.

ರಬಕವಿ ಬನಹಟ್ಟಿ ಹಾಗೂ ಸುತ್ತ-ಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಕಾರ ಹುಣ್ಣಿಮೆಯ ಮುನ್ನಾ ದಿನ ಮಣ್ಣಿನ ಎತ್ತುಗಳನ್ನು ಮನೆಗೆ ತೆಗೆದುಕೊಂಡು ಬಂದು ಅವುಗಳನ್ನು ಪೂಜಿಸುತ್ತಾರೆ. ನಂತರ ಕೋಡುಬಳೆಗಳಿಂದ ಅವುಗಳ ಕೋಡುಗಳನ್ನು ಶೃಂಗರಿಸುತ್ತಾರೆ.

ರೈತರು ಕೂಡಾ ಎತ್ತುಗಳಿಗೆ ಸ್ನಾನ ಮಾಡಿಸಿ ಅವುಗಳನ್ನು ಬಣ್ಣಗಳಿಂದ ಶೃಂಗಾರ ಮಾಡಿ ಪೂಜಿಸುತ್ತಾರೆ.

ಬನಹಟ್ಟಿಯಲ್ಲಿ ಕಾರ ಹುಣ್ಣಿಮೆಯ ಅಂಗವಾಗಿ ಸ್ಥಳೀಯ ಮಂಗಳವಾರ ಪೇಟೆಯಲ್ಲಿ ಮಣ್ಣಿನ ಎತ್ತುಗಳ ಮಾರಾಟ ಜೋರಾಗಿತ್ತು. ಸಮೀಪದ ಹೊಸೂರಿನ 20ಕ್ಕೂ ಹೆಚ್ಚು ಕುಟುಂಬಗಳು ಬೆಳಗ್ಗೆ 6 ಗಂಟೆಗೆ ಮಣ್ಣಿನ ಎತ್ತುಗಳನ್ನು ಮಾಡಲು ಆರಂಭಿಸಿ ಸಂಜೆ 7 ಗಂಟೆಯವರೆಗೆ ಮಾರಾಟ ಮಾಡುತ್ತಾರೆ.

ರಬಕವಿ ಬನಹಟ್ಟಿಯಲ್ಲಿ ಅಂದಾಜು 5-6 ಸಾವಿರಕ್ಕೂ ಹೆಚ್ಚು ಜೋಡಿ ಎತ್ತುಗಳನ್ನು ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ಎತ್ತುಗಳನ್ನು ತಲೆಯ ಮೇಲಿಟ್ಟುಕೊಂಡು ಮನೆ ಮನೆಗೆ ತೆರಳಿ ಮಾರಾಟ ಮಾಡಿ ಬರುತ್ತಾರೆ. 30 ರಿಂದ 250ರೂ. ವರೆಗೆ ಎತ್ತುಗಳು ಮಾರಾಟಗೊಂಡವು.

ಹೊಸೂರ ಗ್ರಾಮದ 91 ವರ್ಷದ ಚಂದ್ರವ್ವ ಕುಂಬಾರ ಏಳು ದಶಕಗಳಿಂದ ಎತ್ತುಗಳ ನಿರ್ಮಾಣ ಮಾಡುತ್ತ ಬಂದಿದ್ದಾರೆ. ” ತಮ್ಮ ಒಂದು ಆಣೆಕ್ಕ ಎತ್ತುಗಳನ್ನು ಮಾರಿದಾಕಿ ನಾನು” ಎಂದು ಹೇಳುತ್ತಾರೆ. ಅವರ ಮನೆಯ ಸದಸ್ಯರಾದ ಯಲ್ಲವ್ವ, ಸುಜಾತಾ, ರಾಜೇಶ್ವರಿ, ಶಾಂತವ್ವ ಹಾಗೂ ಹೊಸ ತಲೆಮಾರಿನ ಮೊಮ್ಮಕ್ಕಳಾದ ಆಶಾ ಕುಂಬಾರ ರೇಣುಕಾ ಕುಂಬಾರ, ಕೂಡಾ ಎತ್ತುಗಳ ನಿರ್ಮಾಣದಲ್ಲಿ ತೊಡಗಿದ್ದಾರೆ.

ಕಾರ ಹುಣ್ಣಿಮೆಯ ದಿನದಂದು ಸಂಜೆ ಎತ್ತುಗಳ ಓಟದ ಸ್ಪರ್ಧೆಯೊಂದಿಗೆ ಕಾರ ಹುಣ್ಣಿಮೆ ಮುಕ್ತಾಯಗೊಂಡರೆ ಇದು ಮುಂದೆ ಯಾವ ಬೆಳೆಗಳನ್ನು ಬೆಳೆಯಬಹುದು ಎಂಬುದಕ್ಕೆ ಮುನ್ನುಡಿಯಾಗುತ್ತದೆ.

ಜಗತ್ತು ಆಧುನಿಕತೆಯತ್ತ ಸಾಗಿದ್ದರೂ ನಮ್ಮ ಗ್ರಾಮೀಣ ಭಾಗದ ಜನರು ಇನ್ನೂ ನಮ್ಮ ದೇಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೊರಟಿರುವುದಕ್ಕೆ ಕಾರು ಹುಣ್ಣಿಮೆ ಸಾಕ್ಷಿಯಾಗಿದೆ.

ಕಿರಣ ಶ್ರೀಶೈಲ ಆಳಗಿ

 

Advertisement

Udayavani is now on Telegram. Click here to join our channel and stay updated with the latest news.

Next