ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಪೊಲಿಪು ಜಂಕ್ಷನ್‌ನಲ್ಲಿ ವಾಹನ ಢಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದ ವಿದ್ಯಾರ್ಥಿಯ ನೆರವಿಗೆ ಧಾವಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾನವೀಯತೆ ಮೆರೆದಿದ್ದಾರೆ.
ಉಚ್ಚಿಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಡುಪಿಗೆ ತೆರಳುತ್ತಿದ್ದ ಸಂದರ್ಭ ಪೊಲಿಪು ಮಸೀದಿ ಜಂಕ್ಷನ್ ಬಳಿ ಪೊಲಿಪು ಸರಕಾರಿ ಹಾಸ್ಟೆಲ್ ವಿದ್ಯಾರ್ಥಿ ಉತ್ತರ ಕರ್ನಾಟಕ ಮೂಲದ ಸುರೇಶ್‌ನಿಗೆ ವಾಹನ ಢಿಕ್ಕಿ ಹೊಡೆದು ಗಾಯಗೊಂಡಿರುವುದನ್ನು ಗಮನಿಸಿದರು.
ಕೂಡಲೇ ಕಾರನ್ನು ನಿಲ್ಲಿಸಿ, ವಿದ್ಯಾರ್ಥಿಯ ಬಳಿಗೆ ಬಂದು ಉಪಚರಿಸಿ, ತಮ್ಮ ಜತೆಗಿದ್ದವರ ಬಳಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಿದರು. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ರಿಕ್ಷಾ ಚಾಲಕನೋರ್ವ ಪುರಸಭೆ ಮುಖ್ಯಾಧಿಕಾರಿ ಸಂತೋಷ್ ಕುಮಾರ್ ಅವರ ನೆರವಿನೊಂದಿಗೆ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.
ಬಳಿಕ ಕಾಪು ಪುರಸಭೆ ಮುಖ್ಯಾಧಿಕಾರಿ ಸಂತೋಷ್ ಕುಮಾರ್ ಅವರು ಗಾಯಾಳು ವಿದ್ಯಾರ್ಥಿಯನ್ನು ವೈದ್ಯಕೀಯ ಪರಿಶೀಲನೆಗಾಗಿ ಉಡುಪಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದರು. ಸಂಜೆಯ ವೇಳೆ ವಿದ್ಯಾರ್ಥಿ ಹಾಸ್ಟೆಲ್‌ಗೆ ಮರಳಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ಸೋಮವಾರ ಚಾಮರಾಜನಗರದ ಹೊರವಲಯದಲ್ಲಿ ರಸ್ತೆ ಅಪಘಾತದಿಂದ ರಕ್ತದ ಮಡುವಿನಲ್ಲಿ ನರಳುತ್ತಿದ್ದ ಇಬ್ಬರು ಯುವಕರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದ ಸಚಿವೆ ಹೆಬ್ಬಾಳ್ಕರ್ ಅವರು ಉಡುಪಿಗೆ ತೆರಳುವ ಅವಸರದ ನಡುವೆಯೂ ಮಾಡಿದ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಪ್ರಸಾದ್‌ರಾಜ್ ಕಾಂಚನ್ ಮೊದಲಾದವರು ಸಚಿವರಿಗೆ ಸಾಥ್ ನೀಡಿದ್ದಾರೆ.