ಕಾಪು : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ದಂಡತೀರ್ಥ ಬಿಕ್ಕೋ ಬಳಿ ಟ್ಯಾಂಕರ್ ನಿಂದ ಸೋರಿಕೆಗೊಂಡ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್ ಎಂದು ಗುರುತಿಸಲಾಗಿದ್ದು, ಸ್ಥಳೀಯರ ಆತಂಕ ದೂರವಾಗಿದೆ.
ತಾಂತ್ರಿಕ ಕಾರಣದಿಂದ ಟ್ಯಾಂಕರ್ ನಿಂದ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್ ಸೋರಿಕೆಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು ಪರಿಶೀಲನೆ ನಡೆಸಿ ಕೂಡಲೇ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ನೀಡಿದ್ದರು.
ತಕ್ಷಣ ಸ್ಥಳಕ್ಕೆ ಧಾವಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬಂದಿಗಳು ಕಾರ್ಬನ್ ಡೈಯಾಕ್ಸೈಡ್ ಸೋರಿಕೆಯನ್ನು ತಡೆಗಟ್ಟುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದಾಗಿ ಗ್ಯಾಸ್ ಸೋರಿಕೆಯಾಗುತ್ತಿದೆ ಎಂದು ಗಾಬರಿಗೊಂಡಿದ್ದ ಸ್ಥಳೀಯರು ಮತ್ತು ಹೆದ್ದಾರಿ ಸಂಚಾರಿಗಳು ಆತಂಕದಿಂದ ಪಾರಾಗುವಂತಾಗಿದೆ.
ಇದನ್ನೂ ಓದಿ: ಕಾಪು: ಹೆದ್ದಾರಿಯಲ್ಲಿ ಟ್ಯಾಂಕರ್‌ನಿಂದ ಲಿಕ್ವಿಡ್ ಸೋರಿಕೆ; ಸ್ಥಳೀಯರಲ್ಲಿ ಆತಂಕ
ಘಟನೆಯಿಂದ ಗಾಬರಿಗೊಂಡ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬದಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಸಂಪೂರ್ಣ ಪರಿಶೀಲನೆ ಮುಗಿಯುವವರೆಗೆ ಏಕಪಥವಾಗಿ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದು ಈಗ ಮತ್ತೆ ಯಥಾಸ್ಥಿತಿಯಲ್ಲಿ ವಾಹನಗಳು ಓಡಾಡುತ್ತಿವೆ.