ಕಾಪು: ಭಾಜಪ ಕಳೆದ ಬಾರಿ 1 ಕೋಟಿ ಸದಸ್ಯತ್ವದ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ. ಈ ಬಾರಿ ಕಾಪು ಕ್ಷೇತ್ರದಲ್ಲಿ 40 ರಿಂದ 50 ಲಕ್ಷ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ. ಪಕ್ಷವನ್ನು ಮತ್ತಷ್ಟು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ನಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.
ಅವರು ಶನಿವಾರದಂದು ಕಾಪು ಕ್ಷೇತ್ರ ಬಿಜೆಪಿ ವತಿಯಿಂದ ಇಲ್ಲಿನ ಬಿಜೆಪಿ ಕಛೇರಿಯ ಬಳಿ ನಡೆದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ರಿಕ್ಷಾ ಚಾಲಕ ಮಾಲಕರು ಮತ್ತು ಕೂಲಿ ಕಾರ್ಮಿಕರಿಂದ ಮಿಸ್ಡ್ಕಾಲ್ ಮಾಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎಂಬ ಧ್ಯೇಯ ಹೊಂದಿರುವ ಪಕ್ಷ ಇಂದು ಯಾರೇ ಅಭ್ಯರ್ಥಿ ಆದರೂ ಯಾವುದೇ ಸ್ತರದ ಚುನಾವಣೆಯನ್ನು ಗೆಲ್ಲುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಪಕ್ಷವನ್ನು ಈ ಮಟ್ಟಕ್ಕೆ ಕಟ್ಟಿ ಬೆಳೆಸಲು ಅದೆಷ್ಟೋ ಹಿರಿಯ ನಾಯಕರು ಶ್ರಮಿಸಿದ್ದಾರೆ. ಇದಕ್ಕಾಗಿ ಸಾಕಷ್ಟು ಅವಮಾನವನ್ನು ಸಹಿಸಿದ್ದಾರೆ. ಅವರ ಶ್ರಮ ವ್ಯರ್ಥವಾಗಲು ಬಿಡಬಾರದು ಎಂದರು.
ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ, 11 ಕೋಟಿ ಸದಸ್ಯರನ್ನು ಹೊಂದಿರುವ ಬಿಜೆಪಿ ಜಗತ್ತಿನ ಅತ್ಯಂತ ದೊಡ್ಡ ಸಂಘಟನೆಯಾಗಿ ಮೂಡಿ ಬಂದಿದೆ. ಇದನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕ್ಷೇತ್ರದ ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಲಿದ್ದಾರೆ ಎಂದರು.
ಈ ಕ್ಷೇತ್ರದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನದ ಸಹ ಸಂಚಾಲಕಿ ಜಿ. ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾ. ಪಂ. ಸದಸ್ಯರಾದ ಕೇಶವ ಮೊಲಿ, ಬೇಬಿ ರಾಜೇಶ್, ಹೆಜಮಾಡಿ ಗ್ರಾ. ಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಆತ್ರಾಡಿ ಗ್ರಾ. ಪಂ ಅಧ್ಯಕ್ಷ ಗುರುನಂದನ್ ನಾಯಕ್, ಕಾಪು ಪುರಸಭಾ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ಶಾಂಭವಿ ಕುಲಾಲ್, ರಮಾ ವೈ.ಶೆಟ್ಟಿ, ಗುಲಾಬಿ ಪಾಲನ್, ಸುಧಾ ರಮೇಶ್, ಪ್ರಮುಖರಾದ ಗಂಗಾಧರ ಸುವರ್ಣ, ವಿಜಯ ಕುಮಾರ್ ಉದ್ಯಾವರ, ಗುರುಪ್ರಸಾದ್ ಶೆಟ್ಟಿ, ಪವಿತ್ರಾ ಶೆಟ್ಟಿ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಸುಮಾ ಉದಯ ಶೆಟ್ಟಿ, ನಿತಿನ್ ಸೇರಿಗಾರ್, ಅನಿಲ್ ಶೆಟ್ಟಿ, ಸತೀಶ್ ಉದ್ಯಾವರ, ಗೋಪಾಲಕೃಷ್ಣ ರಾವ್ ಉಪಸ್ಥಿತರಿದ್ದರು.
ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳಿಧರ ಪೈ ಸ್ವಾಗತಿಸಿದರು. ಕ್ಷೇತ್ರ ಸದಸ್ಯತ್ವ ನೊಂದಣಿ ಅಭಿಯಾನದ ಸಂಚಾಲಕ ಶ್ರೀಕಾಂತ್ ನಾಯಕ್ ನಿರೂಪಿಸಿ ವಂದಿಸಿದರು.