ಕಾಪು: ಕಾಪು ಪೊಲೀಸ್ ಠಾಣೆ ಮತ್ತು ಕಾಪು ವೃತ್ತ ವ್ಯಾಪ್ತಿಯಲ್ಲಿ ಯಾವುದೇ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲೂ ಪೊಲೀಸ್ ಇಲಾಖೆಯ ತುರ್ತು ಕರೆಗೆ ಸ್ಪಂದಿಸಿ, ಸಹಕರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಮತ್ತು ಮೃತ ದೇಹಗಳ ರವಾನೆಗಾಗಿ ನಿಸ್ವಾರ್ಥ ಸೇವೆ ನೀಡುತ್ತಿರುವ ಸಮಾಜ ಸೇವಕ ಸೂರಿ ಶೆಟ್ಟಿ ಅವರನ್ನು
ಸಮ್ಮಾನಿಸಲಾಯಿತು.
ಸಮ್ಮಾನ ನೆರವೇರಿಸಿದ ಕಾರ್ಕಳ ಉಪ ವಿಭಾಗದ ಪೋಲಿಸ್ ಉಪಾಧೀಕ್ಷಕ ಕೃಷ್ಣಕಾಂತ್ ಮಾತನಾಡಿ, ಪೊಲೀಸ್ ಮತ್ತು ಜನರ ನಡುವಿನ ಅಂತರಗಳು ಕಡಿಮೆಯಾದಾಗ ಪೊಲೀಸ್ ಇಲಾಖೆ ಹೆಚ್ಚು ಹೆಚ್ಚು ಜನಸ್ನೇಹಿಯಾಗಿ ಕೆಲಸ ಮಾಡಲು ಸಾಧ್ಯವಿದೆ ಎಂದರು.
ಕಾರ್ಕಳ ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್, ಕಾಪು ಪುರಸಭೆಯ ಮುಖ್ಯಾಧಿಕಾರಿ ಕೆ. ರಾಯಪ್ಪ, ಕಾಪು ಜೇಸಿಐ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಶಿವಶಂಕರ್, ನ್ಯಾಯವಾದಿ ಪ್ರದೀಪ್ ಬಿ.ಜೆ., ಭಾರತೀಯ ಜೀವವಿಮಾ ವಿಭಾಗದ ಕಾಪು ಕಛೇರಿಯ ವ್ಯವಸ್ಥಾಪಕ ಕೆ.ವಿ. ಕಿರಣ್ ಕುಮಾರ್, ಕಾಪು ಠಾಣಾಧಿಕಾರಿ ಜಯ ಕೆ., ಕಾಪು ಪೊಲೀಸ್ ಠಾಣೆಯ ಸಿಬಂದಿ ಉಪಸ್ಥಿತರಿದ್ದರು.
ಸೂರಿ ಶೆಟ್ಟಿ ಸೇವೆಗೆ ಹ್ಯಾಟ್ಸಾಫ್
ಕಾಪುವಿನ ಸೂರಿ ಶೆಟ್ಟಿ ಅವರು ಪೊಲೀಸರು ನೀಡುವ ಕರೆಗೆ ತುರ್ತಾಗಿ ಸ್ಪಂದಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಮತ್ತು ಯಾವುದೇ ಸ್ಥಿತಿಯಲ್ಲಿರುವ ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಲು ಮುಂದಾಗುತ್ತಾರೆ. ಸಮಾಜದಲ್ಲಿ ಇಂತಹ ನಿಸ್ವಾರ್ಥ ಸೇವಕರ ಅಗತ್ಯವಿದೆ
– ಕೃಷ್ಣಕಾಂತ್,
ಎಎಸ್‌ಪಿ, ಕಾರ್ಕಳ ಉಪವಿಭಾಗ