ಕಾಪು: ಕಾಪು ಸಮೀಪದ ಮಜೂರಿನ ಗೋವರ್ಧನ ಭಟ್ ಅವರು ಶನಿವಾರ ಜೀವಂತ ನಾಗರ ಹಾವಿಗೆ ತನುವೆರೆದು ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು.
ಪ್ರತೀ ವರ್ಷ ನಾಗರ ಪಂಚಮಿಯಂದು ತನ್ನ ಮನೆಯಲ್ಲಿ ಶುಶ್ರೂಷೆಯಲ್ಲಿರುವ ನಾಗರ ಹಾವುಗಳಿಗೆ ತನು ಎರೆಯುವ ಗೋವರ್ಧನ ಭಟ್ ಅವರು ಈ ಬಾರಿ ಎಂಟು ನಾಗರ ಹಾವುಗಳಿಗೆ ತನು ಎರೆದು, ಪೂಜಿಸಿದರು.
ಹಿಂದಿನ ವರ್ಷಗಳಲ್ಲಿ ಸ್ಥಳೀಯರ ಜೊತೆಗೂಡಿ ಜೀವಂತ ನಾಗರ ಹಾವುಗಳಿಗೆ ತನುವೆರೆದು ನಾಗರ ಪಂಚಮಿಯನ್ನು ಆಚರಿಸುತ್ತಿದ್ದ ಅವರು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿ ತಾವು ಮಾತ್ರಾ ಕುಟುಂಬ ವರ್ಗದವರ ಜೊತೆಗೂಡಿ ಆಚರಿಸಿದರು.
ಸಾವಿರಾರು ಹಾವುಗಳಿಗೆ ಮರುಜನ್ಮ : ವಿವಿಧೆಡೆ ಅಪಾಯಕ್ಕೆ ಸಿಲುಕಿ ಗಾಯಗೊಳ್ಳುವ ನಾಗರ ಹಾವುಗಳನ್ನು ಮನೆಗೆ ತಂದು ಶುಶ್ರೂಷೆ ನೀಡಿ, ಆರೈಕೆ ಮಾಡುವ ಕಾಯಕದಲ್ಲಿ ನಿರತರಾಗಿರುವ ಗೋವರ್ಧನ ಭಟ್ ಅವರು ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್ ಆಗಿದ್ದು, ಕೇಟರಿಂಗ್ ಉದ್ಯಮ ನಡೆಸುತ್ತಿದ್ದಾರೆ.
ಇದರೊಂದಿಗೆ ಸಮಾಜ ಸೇವೆಯಲ್ಲೂ ನಿರತರಾಗಿರುವ ಇವರು ಉರಗ ಪ್ರೇಮಿಯಾಗಿ ಈವರೆಗೆ ಸಾವಿರಾರು ಹಾವುಗಳಿಗೆ ಮರು ಜನ್ಮ ನೀಡಿದ್ದಾರೆ. ಅವರ ಆರೈಕೆಯಲ್ಲಿ ಚೇತರಿಸಿಕೊಂಡ ಹಾವುಗಳನ್ನು ಮರಳಿ ನಾಗ ಬನ, ಕಾಡಿನಲ್ಲಿ ಬಿಟ್ಟು ಬರುವ ಅವರು ಸುತ್ತಲಿನ ಜನರಿಗೆ ಮಾದರಿಯಾಗಿದ್ದಾರೆ.