Advertisement

Kapu ಮಾರಿಪೂಜೆಗೆ ವೈಭವದ ಚಾಲನೆ: ಮೂರು ಮಾರಿಗುಡಿಗಳಲ್ಲಿ ವೈಭವದ ಉತ್ಸವ

12:45 AM Mar 27, 2024 | Team Udayavani |

ಕಾಪು: ಕಾಪು ಶ್ರೀ ಹಳೇ ಮಾರಿಗುಡಿ, ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇ ಮಾರಿಗುಡಿಗಳಲ್ಲಿ ಏಕಕಾಲದಲ್ಲಿ ಜರಗುವ ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಮಂಗಳವಾರ ಸಂಜೆ ವೈಭವದ ಚಾಲನೆ ದೊರಕಿದ್ದು ಬುಧವಾರ ಸಂಜೆಯ ವರೆಗೆ ಮುಂದುವರಿಯಲಿದೆ.

Advertisement

ಮಂಗಳವಾರ ರಾತ್ರಿ ಹಳೇ ಮಾರಿಗುಡಿಗೆ ಶ್ರೀ ವೆಂಕಟರಮಣ ದೇವಸ್ಥಾನ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಸ್ವರ್ಣಾಭರಣ ಗಳನ್ನು ಬಿರುದಾವಳಿಯಲ್ಲಿ ಮೆರವಣಿಗೆ ಮೂಲಕ ತರಲಾಯಿತು. ಬಳಿಕ ಹೊಂಗಾರಕನ ಮರದಲ್ಲಿ ಕೆತ್ತಿದ ಮೂರ್ತಿ ಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ, ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಬುಧವಾರ ಸಂಜೆ ತೆರೆ
ಗದ್ದುಗೆ ಪ್ರತಿಷ್ಠೆ ಬಳಿಕ ಮಹಾಪೂಜೆ, ದರ್ಶನ ಸೇವೆ ನಡೆಯಿತು. ಬುಧವಾರ ಮಧ್ಯಾಹ್ನದವರೆಗೂ ಭಕ್ತರಿಗೆ ಮಾರಿಯಮ್ಮ ದೇವಿಯ ದರುಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಬುಧವಾರದ ಮಧ್ಯಾಹ್ನ‌ ಪೂಜೆ ನಡೆದು, ಸಂಜೆ ದರ್ಶನ ಸೇವೆ ನಡೆಯುತ್ತದೆ. ದರ್ಶನ ಸೇವೆಯಲ್ಲಿ ಅಭಯ ಪ್ರಸಾದ ವಿತರಣೆ ಬಳಿಕ ಮಾರಿಯಮ್ಮ ದೇವಿಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಮಲ್ಲಾರಿನಲ್ಲಿ ವಿಸರ್ಜಿಸುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ.

ಗದ್ದುಗೆ ಪೂಜೆ ವಿಶೇಷ
ಗದ್ದುಗೆಯೇ ಪ್ರಧಾನವಾಗಿರುವ ಕಾಪು ಮಾರಿಯಮ್ಮನ ಸನ್ನಿಧಿಯಲ್ಲಿ ಗದ್ದುಗೆ ಪೂಜೆ ವಿಶೇಷ ಸೇವೆಯಾಗಿದ್ದು ಅದರ ಜತೆಗೆ ಹೂವಿನ ಪೂಜೆ, ಕುಂಕುಮಾರ್ಚನೆ ಸೇವೆ ಸಹಿತ ವಿವಿಧ ಸೇವೆ, ಹರಕೆಗಳು ಸಮರ್ಪಿಸಲ್ಪಡುತ್ತವೆ. ಮೂರು ಕಡೆಗಳಲ್ಲೂ ಸೇರಿ 200ಕ್ಕೂ ಅಧಿಕ ಮಾರಾಟ ಮಳಿಗೆಗಳು ತೆರೆದಿವೆ.

ಬಂದೋಬಸ್ತ್, ಸ್ವತ್ಛತೆಗೆ ಆದ್ಯತೆ
ಮೂರು ಮಾರಿಗುಡಿಗಳ ಸುತ್ತ ಬಿಗು ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ. ಹಿರಿಯ ಅಧಿಕಾರಿಗಳ ಸಹಿತವಾಗಿ ನೂರಾರು ಮಂದಿ ಪೊಲೀಸರನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸ್ವತ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ಕಾಪು ಪುರಸಭೆ ವತಿಯಿಂದ 14 ಮಂದಿಯ ತಂಡವನ್ನು ಸ್ವತ್ಛತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next