Advertisement

ಕಾಪು-ಮಲ್ಲಾರು ಉರ್ದು ಶಾಲೆಗಳ ಕಟ್ಟಡ ಶಿಥಿಲ; ಕಿಡಿಗೇಡಿಗಳ ಕಾಟ‌

04:09 PM Jul 09, 2024 | Team Udayavani |

ಕಾಪು: ಕಿಡಿಗೇಡಿಗಳ ಕಾಟ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರಿನ ಒಂದೇ ಕ್ಯಾಂಪಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂರು ಶಾಲೆಗಳ 144 ವಿದ್ಯಾರ್ಥಿಗಳು ಮಳೆಗಾಲದಲ್ಲಿ ಆತಂಕದಿಂದಲೇ ಪಾಠ ಕೇಳಬೇಕಾಗಿದೆ.

Advertisement

ಮಲ್ಲಾರು ಉರ್ದು ಸರಕಾರಿ ಸಂಯುಕ್ತ ಪ್ರೌಢಶಾಲೆ, ಉರ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮೌಲಾನಾ ಆಜಾದ್‌
ಆಂಗ್ಲ ಮಾಧ್ಯಮ ಮಾದರಿ ಶಾಲೆಗಳು ಒಂದೇ ಕ್ಯಾಂಪಸ್‌ ನೊಳಗೆ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ಕ್ರಮವಾಗಿ 33, 40 ಮತ್ತು 70 ಮಂದಿ ವಿದ್ಯಾರ್ಥಿಗಳಿದ್ದಾರೆ.

ಮೂರೂ ಶಿಕ್ಷಣ ಸಂಸ್ಥೆಗಳು ಕಿಡಿಗೇಡಿಗಳ ದಾಳಿಗೆ ಗುರಿಯಾಗುತ್ತಿದ್ದು, ಇದರಿಂದಾಗಿ ತರಗತಿ ಕೊಠಡಿಗಳು, ಶಿಕ್ಷಕರ ಕೊಠಡಿ,
ದಾಸ್ತಾನು ಕೊಠಡಿ, ವಾಚನಾಲಯ ಸಹಿತ ಹೆಚ್ಚಿನ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿವೆ. ಮೌಲಾನಾ ಆಜಾದ್‌ ಮಾದರಿ
ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಂತೂ ಗಾಳಿ-ಮಳೆಯ ಮಧ್ಯೆಯೂ ಶಿಥಿಲ ಕಟ್ಟಡದಲ್ಲೇ ಕುಳಿತು ಪಾಠ ಕೇಳಬೇಕಾದ
ಅನಿವಾರ್ಯತೆಗೆ ಸಿಲುಕಿದ್ದಾರೆ.

ಶಿಕ್ಷಕರ ಕೊರತೆಯಿಲ್ಲ, ಉತ್ತಮ ಫ‌ಲಿತಾಂಶ : ಮೌಲಾನಾ ಆಜಾದ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಸಂಪೂರ್ಣ ಉಚಿತ ಶಿಕ್ಷಣವಿದೆ. 2022-23ರಲ್ಲಿ 23 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು ಶೇ. 81ರಷ್ಟು ಫಲಿತಾಂಶ, 2023-24ರಲ್ಲಿ 6ರಲ್ಲಿ ಆರೂ ವಿದ್ಯಾರ್ಥಿಗಳು ಉತ್ತೀ ರ್ಣರಾಗಿದ್ದಾರೆ. ಸರಕಾರ ನೇಮಿಸಿದ 6 ಮಂದಿ
ಗೌರವ ಶಿಕ್ಷಕರೊಂದಿಗೆ ಓರ್ವ ಮುಖ್ಯ ಶಿಕ್ಷಕರು ಇಲ್ಲಿದ್ದಾರೆ. ಪೂರ್ಣಕಾಲಿಕ ಶಿಕ್ಷಕರ ನೇಮಕಾತಿ ನಿರೀಕ್ಷಿಸಲಾಗುತ್ತಿದೆ. ಶಿಥಿಲ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರವಾದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಬಹುದು ಎನ್ನುತ್ತಾರೆ ಶಿಕ್ಷಕರು.

Advertisement

ಜಾಗ ಮಂಜೂರಾಗಿದೆ, ಕಟ್ಟಡ ರಚನೆ ವಿಳಂಬ: ಮಲ್ಲಾರು ಶಾಲೆಗೆ ಬೆಳಪುವಿನಲ್ಲಿ ಈಗಾಗಲೇ ಒಂದು ಎಕರೆ ಜಮೀನು ಮಂಜೂರಾಗಿದ್ದು ಆರ್‌ಟಿಸಿ ಶಾಲೆಯ ಹೆಸರಿಗೆ ವರ್ಗಾವಣೆಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಆದರೆ ಅದಕ್ಕೆ ಬೇಕಾದ ಅನುದಾನ, ಮಂಜೂರಾತಿ ಇನ್ನೂ ಸಿಕ್ಕಿಲ್ಲ.  ಹಾಗಾಗಿ ಕಟ್ಟಡ ರಚನೆ ವಿಳಂಬವಾಗುತ್ತಿದೆ.

ಸಮಸ್ಯೆಗಳು ಹತ್ತಾರು
*ಕಿಟಕಿಗೆ ಬಾಗಿಲುಗಳಿಲ್ಲದೆ ಮಳೆ ನೀರು ತರಗತಿಯೊಳಗೆ ಬರುತ್ತಿದೆ. ಹೆಂಚುಗಳು ಒಡೆದು ನೀರು ಸೋರುತ್ತಿದೆ.
*ಜೋರು ಮಳೆ ಬಂದಾಗ ಅರ್ಧ ಕೊಠಡಿಯಷ್ಟೇ ವಿದ್ಯಾರ್ಥಿಗಳ ಬಳಕೆಗೆ ಸಿಗುತ್ತದೆ.
*ಮಳೆ ಬಂದಾಗ ವಿದ್ಯಾರ್ಥಿಗಳು ಡೆಸ್ಕ್ ಬೆಂಚ್‌ಗಳನ್ನು ಸರಿಸಿ ಪುಸ್ತಕ ಬ್ಯಾಗ್‌ ರಕ್ಷಿಸಿಕೊಳ್ಳಬೇಕು.
*ಕಿಟಕಿ ಬಾಗಿಲುಗಳಿಲ್ಲದೆ ಪುಸ್ತಕ, ಗ್ರಂಥಾಲಯ ಸಹಿತ ವಿವಿಧ ವಸ್ತುಗಳು ಒದ್ದೆಯಾಗುತ್ತಿವೆ.
*ಕಾಂಕ್ರೀಟ್‌ ಮೇಲ್ಛಾವಣಿಯ ಕಚೇರಿ ಕೊಠಡಿಯೂ ಸೋರುತ್ತಿದ್ದು ಬಕೆಟ್‌ ಇಟ್ಟು ಕೊಳ್ಳಬೇಕಾದ ಅನಿವಾರ್ಯತೆ!

ಶೀಘ್ರವೇ ದುರಸ್ತಿ ಕಾರ್ಯ
ಶಾಲಾ ಕಟ್ಟಡಗಳಿಗೆ ಕಿಡಿಗೇಡಿಗಳ ಹಾವಳಿ ಜೋರಾಗಿದೆ. ಪ್ರತೀ ವರ್ಷ ಇಲಾಖೆಯಿಂದ ದುರಸ್ತಿಗೊಳಿಸಬೇಕಾಗಿದೆ. ಮಳೆಯಿಂದ ಮಕ್ಕಳಿಗೆ ಆಗುತ್ತಿರುವ ತೊಂದರೆಗಳನ್ನು ಪರಿಶೀಲಿಸಲಾಗಿದ್ದು, ಅವಶ್ಯ ದುರಸ್ತಿ ಕೆಲಸಗಳನ್ನು ಎರಡು ದಿನದಲ್ಲಿ ನಡೆಸಲಾಗುವುದು.
-ಪೂರ್ಣಿಮಾ ಬಿ. ಚೂರಿ,
ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉಡುಪಿ

ಈ ವರ್ಷದಲ್ಲಿ ಕಟ್ಟಡ ನಿರ್ಮಾಣ ಸಾಧ್ಯತೆ
ಶಾಲೆಯ ಸೊತ್ತುಗಳಿಗೆ ಕಿಡಿಗೇಡಿಗಳಿಂದ ಆಗುತ್ತಿರುವ ತೊಂದರೆಯ ಬಗ್ಗೆ ದೂರುಗಳು ಬಂದಿವೆ. ಪರಿಶೀಲನೆಯನ್ನೂ ನಡೆಸಲಾಗಿದೆ. ಈ ಬಗ್ಗೆ ಸ್ಥಳೀಯರು, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳನ್ನೊಳಗೊಂಡ ಸಮಿತಿ ರಚಿಸಿ, ರಜಾದಿನಗಳಲ್ಲಿ ಎಚ್ಚರಿಕೆ ವಹಿಸಲು ಸೂಚಿಸ ಲಾಗಿದೆ. ಪೊಲೀಸ್‌ ಇಲಾಖೆ ಗಮನಕ್ಕೂ ತರ ಲಾಗಿದೆ. ಈ ವರ್ಷದಲ್ಲಿ ಕಟ್ಟಡ ನಿರ್ಮಿಸಿ ಕೊಡುವ ಭರವಸೆ ದೊರಕಿದೆ.
*ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

*ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next