Advertisement

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ

08:54 PM Sep 17, 2021 | Team Udayavani |

ಕಾಪು: ಕಾಪು ಲೈಟ್‌ ಹೌಸ್‌ ಶತಮಾನೋತ್ತರ ವಿಂಶತಿ ವರ್ಷಾಚರಣೆಯ ಸಂಭ್ರಮದಲ್ಲಿದೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ 120ನೇ ವರ್ಷದ ಸಂಭ್ರಮ ಆಚರಿಸಲು ಕೋವಿಡ್ ಅಡ್ಡಿಯಾಗಿದೆ.

Advertisement

1901ರ ಬ್ರಿಟಿಷ್‌ ಆಡಳಿತ ಕಾಲದಲ್ಲಿ ಕಾಪು ದೀಪ ಸ್ಥಂಭ ನಿರ್ಮಾಣಗೊಂಡಿತ್ತು. ಸೀಮೆ ಎಣ್ಣೆಯಿಂದ ಬೆಳಗುವ ಪ್ರಿಸ್‌ ಹೊಳಪಿನ ದೀಪ ಆರಂಭದಲ್ಲಿತ್ತು. ಪ್ರಸ್ತುತ ವಿದ್ಯುತ್‌ ದೀಪದ ಸೌಕರ್ಯ ಹೊಂದಿದೆ. ಸಮುದ್ರ ಮಟ್ಟದಿಂದ 21 ಮೀ. ಎತ್ತರದ ಏಕ ಶಿಲೆಯ ಮೇಲೆ ನಿರ್ಮಾಣ ಗೊಂಡಿರುವ 34 ಮೀ. ಎತ್ತರದಲ್ಲಿರುವ ಲೈಟ್‌ಹೌಸ್‌ ಮೀನುಗಾರರು ಮತ್ತು ಸಮುದ್ರಯಾನಿಗಳನ್ನು ದಡದತ್ತ ತಲುಪಿ ಸುವ ಕಾರ್ಯ ನಿರ್ವಹಿಸುತ್ತಿದೆ.

ಏನೇನು ಅಭಿವೃದ್ಧಿಯಾಗಿದೆ

ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿಯಿಂದ ಕಾಪು ಬೀಚ್‌ಗೆ ಬರುವ ಅಗಲ ಕಿರಿದಾಗಿದ್ದ ರಸ್ತೆಯು ಅಲ್ಲಲ್ಲಿ ಅಭಿವೃದ್ಧಿಗೊಂಡಿದೆ. ಇಲ್ಲಿ ಹೊಸ ದಾಗಿ ಅಗಲವಾದ ಮೆಟ್ಟಿಲುಗಳನ್ನು ಜೋಡಿಸಲಾಗಿದ್ದು, ಬಂಡೆಯ ಮೇಲೆ ಸುತ್ತಲೂ ಕಬ್ಬಿಣದ ಬೇಲಿ ಹಾಕಲಾಗಿದೆ. ಮಳೆಯಿಂದ

ಕೊಚ್ಚಿ ಹೋಗಿದ್ದ ವಾಕ್‌ ವೇ ಪ್ರದೇಶದ ಮೆಟ್ಟಿಲುಗಳ ಜೋಡಣೆ, ಶೌಚಾಲಯ ನವೀಕರಣ, ಹೈಮಾಸ್ಟ್‌ ಲೈಟ್‌ಗಳನ್ನು ಅಳವಡಿಸಲಾಗಿದೆ.
ಇನ್ನೂ ಆಗಬೇಕಿದೆ ಬಹಳಷ್ಟು ರಾ.ಹೆ. 66ರ ಕಾಪು ಹೊಸ ಮಾರಿಗುಡಿ ಬಳಿಯಿಂದ ಬೀಚ್‌ಗೆ ಬರುವ ರಸ್ತೆ ಮತ್ತು ಪೊಲಿಪು – ಲೈಟ್‌ಹೌಸ್‌ ಬೀಚ್‌ ರಸ್ತೆ ಅಭಿವೃದ್ಧಿಯಾಗಬೇಕಿದೆ. ಪಾರ್ಕಿಂಗ್‌ಗೆ ಸೂಕ್ತ ಜಾಗ ಕಲ್ಪಿಸಬೇಕಿದೆ. ಸಂಗಮ ಸ್ಥಳದಲ್ಲಿ ಬ್ರೇಕ್‌ ವಾಟರ್‌ ಮಾದರಿಯ ಯೋಜನೆ ಅಗ ತ್ಯ ವಿದೆ. ಗರಡಿ ಮತ್ತು ಲೈಟ್‌ಹೌಸ್‌ ರಸ್ತೆ ನಡುವಿನ ಸೇತುವೆ ಬಳಿಯಿಂದ ಲೈಟ್‌ಹೌಸ್‌ಗೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಕ್‌ ವಾಟರ್‌ನ ಎರಡೂ ಬದಿಯಲ್ಲಿ ಹ್ಯಾಂಗಿಂಗ್‌ ಬ್ರಿಡ್ಜ್ – ಸೇತುವೆ ನಿರ್ಮಾಣ ಸಹಿತವಾಗಿ ವಾಕ್‌ ವೇ, ಕಾಪು ಪಡು ಶಾಲೆಯಿಂದ ಲೈಟ್‌ಹೌಸ್‌ವರೆಗೆ ವಾಕ್‌ ವೇ, ಹಿನ್ನೀರಿನ ಹೊಳೆಯಲ್ಲಿ ಅತ್ಯಾಧುನಿಕ ಮಾದರಿಯ ಕಾರಂಜಿ, ಅಕ್ವೇರಿಯಂ ವ್ಯವಸ್ಥೆಗಳ ಜೋಡಣೆಯಾದಲ್ಲಿ ಬೀಚ್‌ ಇನ್ನಷ್ಟು ಬೆಳಗಲಿದೆ.

ಇದನ್ನೂ ಓದಿ:ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ : ರಾತ್ರಿ 10ರವರೆಗೆ ಸಂಚರಿಸಲಿದೆ ರೈಲು ಸಂಚಾರ

ಪ್ರವಾಸಿಗರ ಸಂಖ್ಯೆ ಇಳಿಮುಖ
ಮೂಲಸೌಕರ್ಯಗಳ ಜೋಡಣೆ ಮತ್ತು ಮಕ್ಕಳ ಸೆಳೆಯು ವಿವಿಧ ಆಟಿಕೆ ಸೌಲಭ್ಯ ಗಳೊಂದಿಗೆ ಪ್ರವಾಸಿಗರನ್ನು ಸೆಳೆಯುತ್ತಿದ್ದ ಕಾಪು ಬೀಚ್‌ನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಜೋಡಣೆಗೆ ಕೊರೊನಾ ಅಡ್ಡಿಯಾಗಿದೆ. ಕೊರೊನಾ ಕಾರಣ ದಿಂದ ಬೀಚ್‌ನಲ್ಲಿ ಎಲ್ಲ ಸೌಲಭ್ಯಗಳೂ ಸ್ತಬ್ಧಗೊಂಡಿದ್ದು ಲೈಟ್‌ಹೌಸ್‌ ಒಳಗಿನ ಪ್ರವೇಶ ಮತ್ತು ತುದಿಯ ಮೇಲೇರಲೂ ನಿಷೇಧ ಹೇರಲಾಗಿದೆ.

Advertisement

ನಿರ್ವಹಣೆ ಹೊಣೆ
ಪ್ರಸ್ತುತ ಕಾಪು ಲಾಲ್‌ಬಹದ್ದೂರ್‌ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್‌ ಕಲ್ಚರಲ್‌ ಕ್ಲಬ್‌ ಕಾಪು ಬೀಚ್‌ನ ನಿರ್ವಹಣೆಯ ಗುತ್ತಿಗೆ ವಹಿಸಿದ್ದು ಆನಂದ್‌ ಶ್ರೀಯಾನ್‌ ಮತ್ತು ಸಂತೋಷ್‌ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ಇಲ್ಲಿ ಖಾಸಗಿ ನಿರ್ವಹಣೆಗೆ ನೀಡಿದ ಬಳಿಕ ಮೂರು ಮಂದಿ ಜೀವ ರಕ್ಷಕರು ಕಡಲಿಗೆ ಇಳಿದವರ ಮೇಲೆ ನಿಗಾ ಇಡುತ್ತಿದ್ದು ಇದರಿಂದಾಗಿ ಹಿಂದೆ ನಡೆಯುತ್ತಿದ್ದಷ್ಟು ದುರಂತಗಳು ಈಗ ಕಂಡು ಬರುತ್ತಿಲ್ಲ.

ಶಾಶ್ವತ ಅಂಚೆ ಮೊಹರು ಬಿಡುಗಡೆ
ಲೈಟ್‌ ಹೌಸ್‌ನ 120ನೇ ವರ್ಷಾ ಚರಣೆಯ ಸಂಭ್ರಮಕ್ಕೆ ಕೊಡುಗೆಯಾಗಿ ಅಂಚೆ ಇಲಾಖೆಯು ಕಾಪು ದೀಪಸ್ತಂಭದ ನವೀಕೃತ ಶಾಶ್ವತ ಚಿತ್ರ ಅಂಚೆ ಮೊಹರು ಬಿಡುಗಡೆಗೊಳಿಸಿದೆ.

ಏನೆಲ್ಲ ಆಗಬೇಕಿದೆ
1. ಹೆಚ್ಚುವರಿ ಶೌಚಾಲಯಗಳು.
2 ಶೌಚಾಲಯ ಮತ್ತು ಸ್ನಾನಗೃಹಕ್ಕೆ ಹೆಚ್ಚುವರಿ ಭದ್ರತೆ, ಆವರಣ ಗೋಡೆ.
3 ಸಮುದ್ರ ಸ್ನಾನದ ಅನಂತರ ಸಿಹಿ ನೀರಿನ ಸ್ನಾನಕ್ಕೆ ಶವರ್‌ ಅಳವಡಿಕೆ.
4 ಕುಡಿಯುವ ನೀರಿನ ವ್ಯವಸ್ಥೆ.
5 ಬಿಸಿಲಿಂದ ರಕ್ಷಣೆಗೆ ಕುಟೀರ ನಿರ್ಮಾಣ.
6 ಸೂರ್ಯಾಸ್ತಮಾನದ ಬಳಿಕವೂ ಪ್ರವಾಸಿಗರಿಗೆ ಉಳಿದುಕೊಳ್ಳಲು ಅವಕಾಶ.
7. ಜೀವ ರಕ್ಷಕ ದೋಣಿ ಮತ್ತು ಕಾವಲು ಗೋಪುರ ನಿರ್ಮಾಣ.
8. ತುರ್ತು ಸೇವೆಗೆ ಆ್ಯಂಬುಲೆನ್ಸ್‌ ಸೌಲಭ್ಯ.
9. ಪ್ರಥಮ ಚಿಕಿತ್ಸೆ ಸೌಲಭ್ಯ.
10. ಜಲಸಾಹಸ ಕ್ರೀಡೆಗೆ ಅವಕಾಶ.

ಮೂಲ ಸೌಕರ್ಯಕ್ಕೆ ಒತ್ತು
ಮಳೆಯಿಂದ ಕೊಚ್ಚಿ ಹೋಗಿದ್ದ ವಾಕ್‌ ವೇ ನ ಮೆಟ್ಟಿಲುಗಳ ಜೋಡಣೆ, ಶೌಚಾಲಯ ದುರಸ್ತಿ ಸಹಿತ ಮೂಲ ಸೌಕರ್ಯಗಳ ಜೋಡಣೆಗೆ ಒತ್ತು ನೀಡಲಾಗಿದ್ದು, ಲೈಟ್‌ಹೌಸ್‌ನ ಸುತ್ತಲೂ ಪ್ರಕಾಶಮಾನವಾದ ಬೆಳಕನ್ನು ತೋರುವ ಹೈಮಾಸ್ಟ್‌ ಲೈಟ್‌ ಅಳವಡಿಸಲಾಗಿದೆ. ಬೀಚ್‌ ನಿರ್ವಹಣೆಗೆ ಪ್ರಸ್ತುತ ಮೂವರು ಲೈಫ್‌ ಗಾರ್ಡ್‌ಗಳು ಹಾಗೂ ಬೀಚ್‌ ಕ್ಲೀನಿಂಗ್‌ ಮತ್ತು ಶೌಚಾಲಯ ನಿರ್ವಹಣೆಗೆ ಪ್ರತ್ಯೇಕ ಸಿಬಂದಿಯನ್ನು ನಿಯೋಜಿಸಲಾಗಿದೆ.
-ಆನಂದ್‌ ಶ್ರೀಯಾನ್‌, ಉಸ್ತುವಾರಿ, ಬೀಚ್‌ ನಿರ್ವಹಣ ಸಮಿತಿ

ಅಭಿವೃದ್ಧಿಗೆ ಇನ್ನಷ್ಟು ವೇಗ
ಕಾಪು ಲೈಟ್‌ ಹೌಸ್‌ ಮತ್ತು ಬೀಚ್‌ನ ಸುತ್ತಲಿನಲ್ಲಿ ಹಂತ ಹಂತವಾಗಿ ವಿವಿಧ ಮೂಲ ಸೌಕರ್ಯಗಳನ್ನು ಜೋಡಿಸಲಾಗುತ್ತಿದೆ. ಬಂಡೆಯ ಸುತ್ತಲೂ ಲೇಸರ್‌ ಲೈಟ್‌ಗಳೊಂದಿಗೆ ಇತಿಹಾಸವನ್ನು ತಿಳಿಯ ಪಡಿಸುವ ಮಾದರಿಯ ಯೋಜನೆಯನ್ನು ಅನುಷ್ಠಾನಕ್ಕೆ ತರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಹೊಸದಾಗಿ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಹಿಂದಿನ ಯೋಜನೆಗಳ ಸಹಿತವಾಗಿ ಹೊಸ ಪ್ರಸ್ತಾವನೆಗಳ ಅನುಷ್ಠಾನದ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರಕಿಸಿಕೊಡಲಾಗುವುದು.
-ಕ್ಲಿಫರ್ಡ್‌ ಲೋಬೋ
ಸಹಾಯಕ ನಿರ್ದೇಶಕರು (ಪ್ರಭಾರ), ಪ್ರವಾಸೋದ್ಯಮ ಇಲಾಖೆ

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next