Advertisement

Kapu: ಡಾ| ಎಂಎನ್‌ಆರ್‌ ಸಹಕಾರ ಕ್ಷೇತ್ರದ ಭೀಷ್ಮ: ಲಕ್ಷ್ಮೀ ಹೆಬ್ಬಾಳ್ಕರ್‌

12:22 AM Sep 03, 2023 | Team Udayavani |

ಕಾಪು: ಸಹಕಾರ ರಂಗದ ಸ್ಥಾಪನೆಯ ಹಿಂದೆ ಬಹುದೊಡ್ಡ ಪರಿಕಲ್ಪನೆಯಿದೆ. ಜನರ ಬೆನ್ನೆಲುಬಾಗಿರುವ ಸಹಕಾರ ಕ್ಷೇತ್ರವು ರಾಜ್ಯದ ಅಭಿವೃದ್ಧಿಗೂ ಅಪಾರ ಕೊಡುಗೆ ನೀಡುತ್ತಿದೆ. ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕೆಲಸ ಮಾಡುವ ಮೂಲಕ ಸಹಕಾರಿ ರಂಗದ ಯಶಸ್ಸಿನತ್ತ ಮುಖ ಮಾಡಲು ಸಾಧ್ಯವಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸ‌ಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

Advertisement

ಬೆಳಪು ವ್ಯವಸಾಯ ಸಹಕಾರಿ ಸಂಘದ ಅಮೃತ ಮಹೋತ್ಸವ ಸಂಭ್ರಮಾಚರಣೆ, ಸಹಕಾರಿ ಮಹಲ್‌ ಉದ್ಘಾಟನೆ ಹಾಗೂ ಸಹಕಾರ ಕ್ಷೇತ್ರದ ಸಾಧಕ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ “ಸಹಕಾರಿ ಧ್ರುವ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ರಾಜಕೀಯಕ್ಕೆ ಬನ್ನಿ
ರಾಜ್ಯದಲ್ಲಿ ಸಹಕಾರ ಕ್ಷೇತ್ರದ ಮಹತ್ವ ಮತ್ತು ಸಹಕಾರಿ ಮೌಲ್ಯವನ್ನು ಎತ್ತಿ ಹಿಡಿದು ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿರುವ ಡಾ| ಎಂ.ಎನ್‌.ಆರ್‌. ಸಹಕಾರ ಕ್ಷೇತ್ರದ ಭೀಷ್ಮ. ಸಹಕಾರಿಗಳ ಪಾಲಿನ ಆಪದ್ಭಾಂದವರಾಗಿರುವ ಅವರಿಗೆ ಸಹಕಾರ ಧ್ರುವ ಪ್ರಶಸ್ತಿ ನೀಡಿ ಗೌರವಿಸಲು ಖುಷಿಯಾಗುತ್ತಿದೆ. ಸಹಕಾರ ರಂಗದ ಹಿನ್ನೆಲೆಯ ಹಲವರು ರಾಜಕೀಯ ಕ್ಷೇತ್ರದಲ್ಲಿ ಮಿನುಗುತ್ತಿದ್ದು ನೀವೂ ರಾಜಕೀಯಕ್ಕೆ ಬನ್ನಿ, ರಾಜ್ಯದ ಅಭಿವೃದ್ಧಿಯಲ್ಲಿ ಕೈ ಜೋಡಿಸಿ ಎಂದು ಮನವಿ ಮಾಡಿದರು.

ನಬಾರ್ಡ್‌ ಮುಖ್ಯ ಮಹಾ ಪ್ರಬಂಧಕ ಟಿ. ರಮೇಶ್‌ ಮಾತನಾಡಿ, ಸಹಕಾರಿ ಸಂಘಗಳು ರೈತ ಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಮತ್ತು ಅಗತ್ಯ ಮೂಲಸೌಕರ್ಯ ಕಲ್ಪಿಸಲು ನಬಾರ್ಡ್‌ನಿಂದ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ ಎಂದರು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಗ್ರಾಮೀಣ ಜನರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ಉತ್ತಮ ಸೇವೆಯನ್ನು ಸಹಕಾರ ಸಂಘಗಳು ನೀಡುತ್ತಿವೆ ಎಂದು ಶ್ಲಾಘನೀಯ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಬೆಳಪು ವ್ಯ.ಸ. ಸಂಘದ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ, ಬೆಳಪು, ಎಲ್ಲೂರು ಮತ್ತು ಬಡಾ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರ ಆರ್ಥಿಕ ಸಶಕ್ತೀಕರಣದ ಉದ್ದೇಶದೊಂದಿಗೆ ಪಣಿಯೂರಿನಲ್ಲಿ ಸಣ್ಣ ಕಟ್ಟಡದೊಂದಿಗೆ ಪ್ರಾರಂಭಗೊಂಡ ಸಂಘವು 75 ವರ್ಷಗಳಲ್ಲಿ ಹೆಮ್ಮರವಾಗಿದೆ ಎಂದರು.

ಸ್ಮರಣ ಸಂಚಿಕೆ ಬಿಡುಗಡೆ, ಗೌರವಾರ್ಪಣೆ:
“ಅಮೃತ ದರ್ಪಣ’ ಸ್ಮರಣ ಸಂಚಿಕೆ ಬಿಡುಗಡೆ, 5 ಸ್ವ ಸಹಾಯ ಸಂಘಗಳ ಉದ್ಘಾಟನೆ, ಠೇವಣಿಪತ್ರ, ಸಾಲಪತ್ರ, ಉಳಿತಾಯ ಖಾತೆ, ಪಾಸ್‌ಪುಸ್ತಕ ವಿತರಣೆ, ಸೇಫ್‌ ಲಾಕರ್‌ ಕೀ, ಬಡಾ ಗ್ರಾಪಂಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ, ಠೇಣಿದಾರರ ಅದೃಷ್ಟ ಚೀಟಿ ಡ್ರಾ, ಪ್ರತಿನಿಧಿಗಳ ಅದೃಷ್ಟ ಚೀಟಿ ಡ್ರಾ ನಡೆಯಿತು. ಗುತ್ತಿಗೆದಾರ ಸಂತೋಷ್‌ ಪಿ. ಶೆಟ್ಟಿ ತೆಂಕರಗುತ್ತು, ಎಂಜಿನಿಯರ್‌ ತಾರನಾಥ್‌ ಎಚ್‌.ಬಿ., ಸಂಘದ ಮಾಜಿ ಅಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ನಿವೃತ್ತ ಸಿಇಒ ರತ್ನಾಕರ ಸೋನ್ಸ್‌ ಅವರನ್ನು ಸಮ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಬಾರ್ಡ್‌ ಪ್ರಬಂಧಕಿ ಸಂಗೀತಾ ಎಸ್‌. ಕರ್ತ, ಸಹಕಾರಿ ಸಂಘಗಳ ಉಪನಿಬಂಧಕ ಎಚ್‌.ಎನ್‌. ರಮೇಶ್‌, ಕೆಎಂಎಫ್‌ ಅಧ್ಯಕ್ಷ ಸುಚರಿತ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಅಶೋಕ್‌ ಕುಮಾರ್‌ ಶೆಟ್ಟಿ ಕುಕ್ಕೆಹಳ್ಳಿ, ರಾಜೇಶ್‌ ರಾವ್‌ ಪಾಂಗಾಳ, ಬಡಾ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್‌ ಮೆಂಡನ್‌, ನಿ.ಪೂ. ಅಧ್ಯಕ್ಷೆ ಜ್ಯೋತಿ ಗಣೇಶ್‌, ಕೃಷ್ಣ ವೈ. ಶೆಟ್ಟಿ ಮುಂಬಯಿ, ಅಶೋಕ್‌ ಕುಮಾರ್‌ ಕೊಡವೂರು, ರಾಜಾರಾಮ ಭಟ್‌, ಶಶಿಕುಮಾರ್‌ ರೈ ಬಾಲೊಟ್ಟು, ಸದಾಶಿವ ಉಳ್ಳಾಲ, ರಾಜು ಪೂಜಾರಿ, ವಾದಿರಾಜ ಶೆಟ್ಟಿ, ಜಯರಾಜ ರೈ, ಮೋನಪ್ಪ ಶೆಟ್ಟಿ, ಭಾಸ್ಕರ್‌ ಕೋಟ್ಯಾನ್‌, ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್‌, ರವೀಂದ್ರ ಕಂಬಳಿ, ಬೆಳಪು ವ್ಯ.ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ಬೆಳಪು ವ್ಯ.ಸ. ಸಂಘದ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿ, ಸಿಇಒ ಸುಲೋಚನಾ ದೇವಾಡಿಗ ವಂದಿಸಿದರು. ಸತೀಶ್‌ ಶೆಟ್ಟಿ ಗುಡ್ಡೆಚ್ಚಿ ನಿರ್ವಹಿಸಿದರು.

ಡಾ| ರಾಜೇಂದ್ರ ಕುಮಾರ್‌ಗೆ “ಸಹಕಾರಿ ಧ್ರುವ’ ಪ್ರಶಸ್ತಿ
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿರುವ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ “ಸಹಕಾರಿ ಧ್ರುವ’ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. ಸುಮಂಗಲಿಯರು ಆರತಿ ಬೆಳಗಿದರು. ಅಕ್ಕಿ ಮುಡಿ, ಬಾಳೆ ಗೊನೆ, ಅಡಿಕೆ ಗೊನೆ ಸಹಿತ ಬೆಳ್ಳಿ ಫಲಕ, ಸ್ವರ್ಣ ಬಣ್ಣ ಲೇಪಿತ ಫಲಕದೊಂದಿಗೆ ಸಮ್ಮಾನಿಸಿ, ಗೌರವಿಸಲಾಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ಕಂಬಳದ ಕೋಣ ಚೆನ್ನ ವೇದಿಕೆಯ ಮುಂಭಾಗಕ್ಕೆ ಬಂದು ಶಿರಬಾಗಿ ನಮಸ್ಕರಿಸಿದ್ದು ಮುಖ್ಯ ಆಕರ್ಷಣೆಯಾಗಿತ್ತು.

ರಾಜ್ಯ, ರಾಷ್ಟ್ರಕ್ಕೆ ಮಾದರಿ
ಅಮೃತ ಮಹೋತ್ಸವ ಉದ್ಘಾಟಿಸಿದ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿ, ಜನರು ಸಹಕಾರ ಕ್ಷೇತ್ರದ ಮೇಲೆ ಇಟ್ಟಿರುವ ವಿಶ್ವಾಸದಿಂದಾಗಿ ಕರಾವಳಿಯಲ್ಲಿ ಸಹಕಾರಿ ಬ್ಯಾಂಕ್‌ಗಳು ವಾಣಿಜ್ಯ ಬ್ಯಾಂಕ್‌ಗಳನ್ನು ಮೀರಿ ರಾಜ್ಯ, ರಾಷ್ಟ್ರಕ್ಕೆ ಮಾದರಿಯಾಗಿ ಬೆಳೆಯುವಂತಾಗಿದೆ. ನವೋದಯ ಸಂಘಗಳ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ ಎಂದರು.

ಬೆಳಪು ಸಂಘಕ್ಕೆ 15 ಲಕ್ಷ ರೂ.
ಬೆಳಪು ಸಂಘದ ಅಪ್ರತಿಮ ಸಾಧನೆಯನ್ನು ಗುರುತಿಸಿ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ 15 ಲಕ್ಷ ರೂ. ಪ್ರೋತ್ಸಾಹಧನ ನೀಡುವುದಾಗಿ ಎಂ.ಎನ್‌.ಆರ್‌. ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next