ಮಲ್ಪೆ /ಕಾಪು: ಕರಾವಳಿಯ ಆಕರ್ಷಣೀಯ ಪ್ರವಾಸಿ ತಾಣಗಳಾದ ಮಲ್ಪೆ ಹಾಗೂ ಕಾಪು ಬೀಚ್‌ಗಳಿಗೆ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.
ಆದರೆ ಈ ಬಾರಿ ಮಳೆಗಾಲದ ಸಹಜ ಪ್ರಕ್ರಿಯೆ ಎಂಬಂತೆ ಮಲ್ಪೆ ಬೀಚ್, ಕಾಪು ಲೈಟ್ ಹೌಸ್ ಬಳಿ ಸಾಗರ ಬೋರ್ಗರೆಯುತ್ತಿದ್ದರೂ ಕೋವಿಡ್ 19 ಕಾರಣದಿಂದ ಕಾಪು ಬೀಚ್ ಪ್ರವಾಸಿಗರು ಭೇಟಿ ನೀಡದೆ ಭೇಟಿಯಿಲ್ಲದೇ ಬಿಕೋ ಎನ್ನುತ್ತಿದೆ. ಕಳೆದ ಮೂರು ತಿಂಆಗಳಿನಿಂದ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕುಸಿದಿದ್ದು, ಇದರಿಂದಾಗಿ ಬೀಚ್ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ.
ಕೋವಿಡ್-19 ಕಾರಣದಿಂದ ಮುಚ್ಚಿದ ಬೀಚ್ ಮತ್ತು ಪ್ರವಾಸೋದ್ಯಮ ಚಟುವಟಿಕೆಯು ಮತ್ತೆ ಪ್ರಚಾರಕ್ಕೆ ಬರಬೇಕಾದರೆ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಪ್ರವಾಸಿಗರನ್ನು ಸೆಳೆಯುವ ಉತ್ತೇಜನಾತ್ಮಕ ಕಾರ್ಯಕ್ರಮ ಹಾಕಿಕೊಳ್ಳ ಬೇಕಿದೆ. ಮಲ್ಪೆ ಹಾಗೂ ಕಾಪು ಬೀಚ್‌ಗೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಮತ್ತು ಜನರಲ್ಲಿರುವ ಕೋವಿಡ್ 19 ಭಯವನ್ನು ದೂರಗೊಳಿಸುವ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲಾಖೆಗಳು ಪ್ರಯತ್ನಿಸಬೇಕಿವೆ.
ಕೋವಿಡ್-19 ಹರಡುವಿಕೆಯ ಭೀತಿಯಿಂದಾಗಿ ಉಡುಪಿ ಜಿಲ್ಲೆಯ ಎಲ್ಲಾ ಪ್ರವಾಸೋದ್ಯಮ ಕೇಂದ್ರಗಳಿಗೂ ಪ್ರವಾಸಿಗರ ಭೇಟಿಗೆ ವಿಧಿಸಲಾಗಿರುವ ನಿರ್ಬಂಧವನ್ನು ಹಂತ ಹಂತವಾಗಿ ತೆರೆಯಲಾಗುತ್ತಿದೆ. ಬೀಚ್‌ಗಳನ್ನು ತೆರೆಯುವ ಬಗ್ಗೆ ಸರಕಾರ ಈವರೆಗೆ ಯಾವುದೇ ನಿರ್ದಿಷ್ಟ ಸೂಚನೆ ನೀಡದೇ ಇರುವುದರಿಂದ ಸರಕಾರದ ಮುಂದಿನ ಆದೇಶದವರೆಗೆ ಕಾಯಬೇಕಿದೆ. ಅದರ ಜತೆಗೆ ಈಗಾಗಲೇ ಮಳೆಗಾಲವೂ ಆರಂಭವಾಗಿದ್ದು ಸಮುದ್ರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಿರುವುದರಿಂದ ಸದ್ಯಕ್ಕೆ ಬೀಚ್‌ಗಳು ಪ್ರವಾಸಿಗರ ಪ್ರವೇಶಕ್ಕೆ ತೆರೆಯುವುದು ಕಷ್ಟವೇ ಆಗಿದೆ. ಆದರೂ ಬೀಚ್‌ಗಳಲ್ಲಿ ಇರುವ ವ್ಯಾಪಾರಸ್ಥರ ಸದ್ಯದ ಪರಿಸ್ಥಿತಿಯ ಬಗ್ಗೆ ಅವಲೋಕಿಸಿ, ಜಿಲ್ಲಾಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಭಾರ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ಉಡುಪಿ ಇದರ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.