ಉಡುಪಿ: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 80ನೇ ಬಡಗಬೆಟ್ಟು ಗ್ರಾ.ಪಂ.ನ ರಾಜೀವ ನಗರ ಸಂಯುಕ್ತ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಅನ್ಯ ವ್ಯಕ್ತಿ ಮತದಾನ ಮಾಡಿದ್ದು, ಇಲ್ಲಿ ನಕಲಿ ಮತದಾನ ನಡೆದಿರುವ ಆರೋಪಗಳು ಕೇಳಿಬಂದಿತ್ತು.
ಅರ್ಬಿಯ ಕೃಷ್ಣ ನಾಯಕ್ ಮತದಾನ ಮಾಡಲು ಆಗಮಿಸಿದಾಗ ತಮ್ಮ ಹೆಸರಿನಲ್ಲಿ ಆಗಲೇ ಮತದಾನ ಆಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ ತಾನು ಮತದಾನ ಮಾಡಿಲ್ಲ ಎಂದು ಕೃಷ್ಣ ನಾಯಕ್ ತಿಳಿಸಿದರು.
ಪಕ್ಷದ ಏಜೆಂಟ್ಗಳು ಈ ವಿಚಾರದಲ್ಲಿ ಸಂಬಂಧಪಟ್ಟ ಮತಗಟ್ಟೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಖ ನೋಡದೆ ಒಬ್ಬರ ಹೆಸರಿನಲ್ಲಿ ಇನ್ನೊಬ್ಬರಿಗೆ ಮತದಾನ ಮಾಡಲು ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ ಮರುಮತದಾನ ಮಾಡುವಂತೆ ಆಗ್ರಹಿಸಿದರು.
ತಪ್ಪು ಒಪ್ಪಿಕೊಂಡ ಅಧಿಕಾರಿಗಳು ಸರಿಪಡಿಸುವ ಭರವಸೆ ನೀಡಿದರು. ಇಲ್ಲಿ ನಕಲಿ ಮತದಾನ ಆಗಿಲ್ಲ. ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿದ್ದ ಕಾರಣ ಅದಲು ಬದಲು ಆಗಿರಬಹುದು. ಅಧಿಕಾರಿಗಳು ಪರಿಶೀಲಿಸಿ ಎಲ್ಲರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದರು.