ಕಾಪು: ಪತಿ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸಿ ಸ್ವತಃ ಪತ್ನಿಯೇ ಪತಿಗೆ ಖಾರದ ಪುಡಿ ಬೆರೆಸಿದ ಬಿಸಿ ನೀರು ಎರಚಿ ಹಲ್ಲೆ ನಡೆಸಿ ಮನೆಯೊಳಗೆ ಕೂಡಿ ಹಾಕಿ ದೌರ್ಜನ್ಯವೆಸಗಿರುವ ಘಟನೆ ಕಾಪು ತಾಲೂಕಿನ ಮಣಿಪುರ ಗ್ರಾಮದ ಗುಜ್ಜಿ ಎನ್ನುವಲ್ಲಿ ನಡೆದಿದೆ.
ಇನ್ನಾ ಮಡ್ಮಣ್ ನಿವಾಸಿ ಮೊಹಮ್ಮದ್ ಆಸೀಫ್ (22) ದೌರ್ಜನ್ಯಕ್ಕೊಳಗಾದ ಪತಿ. ಆತನ ಪತ್ನಿ ಮಣಿಪುರ ಗುಜ್ಜಿ ನಿವಾಸಿ ಅಫ್ರೀನ್ ಸ್ವತಃ ಪತಿಗೆ ಹಲ್ಲೆ ನಡೆಸಿ ಗೃಹಬಂಧನದಲ್ಲಿರಿಸಿದ ಆರೋಪಕ್ಕೊಳಗಾಗಿರುವ ಮಹಿಳೆ.
11 ತಿಂಗಳ ಹಿಂದೆ ಆಸಿಫ್ ಮತ್ತು ಅಫ್ರೀನ್ ವಿವಾಹವಾಗಿದ್ದು, ಮದುವೆಯಾದ ಒಂದೂವರೆ ತಿಂಗಳ ಬಳಿಕ ಆಕೆ ಪತಿಯ ಮನೆಯಿಂದ ಮಣಿಪುರದಲ್ಲಿರುವ ತನ್ನ ತವರು ಮನೆ ಸೇರಿದ್ದಳು. ತವರು ಮನೆ ಸೇರಿದ ಬಳಿಕ ನಾನು ನಿನಗೆ ಬೇಕಾದಲ್ಲಿ ನನ್ನ ಮನೆಗೆ ಬಂದು ಇರಬೇಕು ಎಂದು ಪತಿಯನ್ನು ಒತ್ತಾಯಿಸಿದ್ದಳು. ಅದರಂತೆ ಪತಿ ಕಳೆದ 9 ತಿಂಗಳಿನಿಂದ ಪತ್ನಿಯ ಮನೆಯಲ್ಲೇ ಉಳಿದಿದ್ದ. ಪತಿ ತನ್ನ ಮನೆಯಲ್ಲಿ ಇರುವಾಗಲೇ ಆತ ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಅನುಮಾನಗೊಂಡಿದ್ದ ಆಕೆ ಈ ಬಗ್ಗೆ ಗಂಡನ ಜತೆ ಪದೇ ಪದೆ ಜಗಳವಾಡುತ್ತಿದ್ದಳು.
ಸೆ. 16ರಂದು ಅಫ್ರೀನ್ ತನ್ನ ಪತಿಯ ಮೊಬೈಲ್ ಅನ್ನು ಪಡೆದುಕೊಂಡು ನೋಡುತ್ತಿದ್ದ ವೇಳೆ ಆತ ನನಗೆ ಹೊರಗೆ ಹೋಗಲಿದೆ ಎಂದು ಆಕೆಯ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದ. ಈ ವೇಳೆ ಆಕೆ ಪತಿಯ ಕೈಗೆ ಕಚ್ಚಿ ಗಾಯಗೊಳಿಸಿದ್ದಳು. ಬಳಿಕ ಪತಿ ಸ್ನಾನಕ್ಕೆಂದು ಬಚ್ಚಲು ಮನೆಗೆ ಹೋಗಿದ್ದು, ಪತ್ನಿ ಬಾತ್‌ರೂಮ್ ಬಾಗಿಲು ಬಡಿದಿದ್ದಳು. ಆತ ಬಾಗಿಲು ತೆಗೆಯುತ್ತಿದ್ದಂತೆ ಸ್ಟೀಲ್ ಪಾತ್ರೆಯಲ್ಲಿ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ತಂದು ಆತನ ಮೈಮೇಲೆ ಎರಚಿದ್ದು, ಇದರಿಂದ ಆತನ ಮುಖ, ಎದೆ, ಬೆನ್ನು ಕೈಗಳಿಗೆ ಸುಟ್ಟಗಾಗಳಾಗಿತ್ತು.
ಈ ವೇಳೆ ಗಾಯಗೊಂಡ ಆಸಿಫ್ ಆಸ್ಪತ್ರೆಗೆ ಹೋಗದಂತೆ ತಡೆದ ಪತ್ನಿ ಅಫ್ರೀನ್, ಅತ್ತೆ ಮೈಮುನಾ, ಮಾವ ಹುಸೈನ್ ಹಾಗೂ ನೆರೆಮನೆಯ ಲತೀಫ್ ಅವರು ಸೇರಿ ಆತನನ್ನು ಮನೆಯೊಳಗೆ ಕೂಡಿಹಾಕಿ ದೌರ್ಜನ್ಯವೆಸಗಿರುವುದಾಗಿ ತಿಳಿದು ಬಂದಿದೆ. ಗೃಹ ಬಂಧನದೊಳಗಿದ್ದ ಆಸಿಫ್‌ಗೆ ಉಳ್ಳಾಲ ನಿವಾಸಿ ಜಮಾತ್ ಎಂಬಾತ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಬಿಡುವುದಿಲ್ಲ, ಕೊಲ್ಲುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಹಲ್ಲೆಗೊಳಗಾದ ಆಸಿಫ್ ಈ ವಿಷಯವನ್ನು ತನ್ನ ಬಾವ ಶಫಿ ಅವರಿಗೆ ಫೋನ್ ಮಾಡಿ ತಿಳಿಸಿದ್ದು, ಅವರು ಬಂದು ಗಾಯಾಳುವನ್ನು ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಮೊಹಮ್ಮದ್ ಆಸೀಫ್ ನೀಡಿರುವ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು ಪೊಲೀಸ್ ಠಾಣಾಧಿಕಾರಿ ಅಬ್ದುಲ್ ಖಾದರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.