ಅದು ದೇವಗಿರಿ ಎಂಬ ಹಳ್ಳಿ. ಹಗಲಲ್ಲಿ ಸುತ್ತ ಹಸಿರಿನಿಂದ ಕಂಗೊಳಿಸುತ್ತ ಸುಂದರವಾಗಿ ಕಾಣುವ ಹಳ್ಳಿ, ರಾತ್ರಿ ನಿಗೂಢ ಅಗೋಚರ ಶಕ್ತಿಗಳ ಭಯದಿಂದ ನಲುಗಿ ಹೋಗುತ್ತಿರುತ್ತದೆ. ಸರಿಯಾದ ರಸ್ತೆ, ದಾರಿ ದೀಪಗಳಿಲ್ಲದ ಈ ಊರಿಗೆ ರಾತ್ರಿ ಹೊತ್ತಲ್ಲ ಹೆಜ್ಜೆ ಹಾಕಲು ಎಲ್ಲರೂ ಹಿಂದೇಟು ಹಾಕುತ್ತಿರುತ್ತಾರೆ. ಆದರೂ ಧೈರ್ಯ ಮಾಡಿ ಆ ಹಾದಿಯಲ್ಲಿ ರಾತ್ರಿ ಹೊತ್ತು ಹೆಜ್ಜೆ ಹಾಕಿದರೆ, ಅಂಥವರಿಗೆ ಅಲ್ಲೊಂದಷ್ಟು ಅನಿರೀಕ್ಷಿತ ಅಗೋಚರ ಶಕ್ತಿಗಳು ಎದುರಾಗುವುದು ಗ್ಯಾರೆಂಟಿ. ಮತ್ತೂಂದೆಡೆ, ಸಿಟಿಯಲ್ಲಿ ನಾಲ್ವರು ತಮ್ಮದೇ ಆದ ಬಾಕ್ಸಾಫೀಸ್ ಎಂಬ ಯು-ಟ್ಯೂಬ್ ಚಾನೆಲ್ ಮಾಡಿ ಕೊಂಡು ಘೋಸ್ಟ್ ಹಂಟಿಂಗ್ ಮಾಡುತ್ತಿರುತ್ತಾರೆ. ಒಮ್ಮೆ ಅಗೋಚರ ಶಕ್ತಿಗಳಿಂದ ನಲುಗುತ್ತಿರುವ ದೇವಗಿರಿ ಊರಿಗೆ ಬರುವ ಈ ನಾಲ್ವರು ಘೋಸ್ಟ್ ಹಂಟಿಂಗ್ ಮಾಡಲು ಮುಂದಾಗುತ್ತಾರೆ. ಆ ನಂತರ ದೇವಗಿರಿಯಲ್ಲಿ ನಡೆಯು ವುದೆಲ್ಲವೂ ಕತ್ತಲು, ಬೆಳಕಿನ ಅಚ್ಚರಿಯ ಘಟನೆಗಳು!
ಇದು ಈ ವಾರ ತೆರೆಗೆ ಬಂದಿರುವ “ಕತ್ತಲು ಬೆಳಕಿನ ನಡುವೆ’ ಸಿನಿಮಾದ ಕಥೆಯ ಒಂದು ಎಳೆ. ಸಿನಿಮಾದ ಟೈಟಲ್ ಮತ್ತು ಕಥೆಯ ಎಳೆಯಲ್ಲಿರುವಂತೆ, ಇದೊಂದು ಹಾರರ್-ಥ್ರಿಲ್ಲರ ಶೈಲಿಯ ಸಿನಿಮಾ. ಒಂದು ಹಳ್ಳಿ, ಅಲ್ಲಿ ರಾತ್ರಿಯ ಹೊತ್ತಲ್ಲಿ ನಡೆಯುವ ನಿಗೂಢ ಘಟನೆಗಳು, ಘೋಸ್ಟ್ ಹಂಟಿಂಗ್ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಒಂದು ಸರಳ ವಿಷಯವನ್ನು ಇಟ್ಟುಕೊಂಡು ಅದಕ್ಕೆ ಒಂದಷ್ಟು ಎಂಟರ್ಟೆನ್ಮೆಂಟ್ ಅಂಶಗಳನ್ನು ಸೇರಿಸಿ ಸಿನಿಮಾ ವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದೆ ಚಿತ್ರತಂಡ.
ಇನ್ನು ವಸಂತ್ ವಿಷ್ಣು, ವಿದ್ಯಾಶ್ರೀ ಗೌಡ, ನವೀನ್ ರಘು, ಹರೀಶ್, ತೇಜಸ್ವಿನಿ, ಮಾಹೀನ್ ಭಾರದ್ವಾಜ್ ಮೊದಲಾದ ಹೊಸ ಪ್ರತಿಭೆಗಳೇ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಬಹುತೇಕರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಹಿರಿಯ ನಟರಾದ ವೈಜನಾಥ ಬಿರಾದಾರ್, ಶರತ್ ಲೋಹಿತಾಶ್ವ ಪಾತ್ರಕ್ಕೆ ಸಿನಿಮಾದಲ್ಲಿ ಹೆಚ್ಚಿನ ಜಾಗವಿಲ್ಲ. ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ ಚೆನ್ನಾಗಿದೆ.
ಜಿ.ಎಸ್.ಕಾರ್ತಿಕ ಸುಧನ್