ನಂಜನಗೂಡು: ನೆರೆಯ ರಾಜ್ಯ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಬಿನಿ ಜಲಾಶಯ ಭರ್ತಿಯಾಗಿ, 20,000 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದ ಕಪಿಲೆ ಮೈದುಂಬಿ ಹರಿಯುತ್ತಿದೆ. ಇದರಿಂದ ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರನ ಸ್ನಾನ ಘಟ್ಟದಲ್ಲಿ ನೀರಿನ ಬರ ಎದುರಿಸುತ್ತಿದ್ದ ಭಕ್ತರಲ್ಲಿ ಈಗ ಸಂತಸ ತರಿಸಿದೆ.
ಮುಂಗಾರು ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಒಳ ಹರಿವು ಇಲ್ಲದೆ ಕಬಿನಿ ಜಲಾಶಯ ಡೆಡ್ ಸ್ಟೋರೇಜ್‌ಗೆ ತಲುಪಿತ್ತು. ಹೀಗಾಗಿ ನದಿಗೆ ಹರಿಯುತ್ತಿದ್ದ ನೀರು ಸಂಪೂರ್ಣ ನಿಲ್ಲಿಸಲಾಗಿತ್ತು. ಬೆಂಗಳೂರಿಗೆ ಕುಡಿಯುಲು ಮಾತ್ರ ಅಲ್ಪ ಪ್ರಮಾಣದ ನೀರು ಹರಿಸಲಾಗುತ್ತಿತ್ತು. ಅದನ್ನು ಕಂಡು ಪತ್ರ ಸ್ನಾನಕ್ಕೆಂದು ಬಂದವರು ಕಪಿಲೆಯಲ್ಲಿ ಸ್ನಾನಕ್ಕೆ ನೀರಿಲ್ಲ ಎಂದು ಹೇಳುತ್ತಿದ್ದರು.
ಜಲಾನಯನ ಪ್ರದೇಶದಲ್ಲಿ ಮಳೆ: ಕೇರಳದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿ ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ. ನಿಧಾನವಾಗಿ ಹದಿನಾರು ಕಾಲು ಮಂಟಪ ಆವರಿಸುತ್ತಿದ್ದು, ತಾಲೂಕಿನ ಕಪಿಲಾ ನದಿಯ ಎಡ, ಬಲ ದಂಡೆ ಗ್ರಾಮಗಳ ಜನರಲ್ಲಿ ಪ್ರವಾಹದ ಆತಂಕ ಕಾಡತೊಡಗಿದೆ.
20 ಸಾವಿರ ಕ್ಯೂಸೆಕ್ ನೀರು: ಕಪಿಲಾ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಮಾತ್ರ ಹೊರಬರುತ್ತಿದೆ. ಸದ್ಯ ಪ್ರವಾಹದ ಭಯ ಇಲ್ಲ. ಆದರೂ, ಹಿಂದಿನ ಅನುಭವದೊಂದಿಗೆ ಕಂದಾಯ ಇಲಾಖೆ, ಶಾಸಕರ ಮಾರ್ಗದರ್ಶನದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆಡಳಿತ ವರ್ಗ ಸರ್ವ ಸನ್ನಧವಾಗಿದೆ ಎಂದು ತಹಶೀಲ್ದಾರ್ ಶಿವಕುಮಾರ್ ಕ್ಯಾಸನೂರು ಹೇಳಿದರು.
ಪ್ರವಾಹ ಬಂದರೆ ತಡೆಯಲಂತೂ ಸಾಧ್ಯವಿಲ್ಲ. ಅದಕ್ಕಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಈಗಾಗಲೇ ತಹಶೀಲ್ದಾರ್ ಶಿವಕುಮಾರ್, ನೀರಾವರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದಕ್ಕಾಗಿಯೇ ಹುಲ್ಲಹಳ್ಳಿಯಲ್ಲಿ ನೀರಾವರಿ, ಕಂದಾಯ, ಕೃಷಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇಲ್ಲಿನ ಮಾಹಿತಿಯನ್ನು ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿದ್ದೇನೆ. ನಾಲೆಗಳಿಗೆ ನೀರು ಬಿಡಲು ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ.
– ದರ್ಶನ್ ಧ್ರುವನಾರಾಯಣ, ಶಾಸಕ.
ಕಬಿನಿ ಜಲಾಶಯ ತುಂಬಿದ್ದು, ಹೆಚ್ಚುವರಿ ನೀರು ನದಿಗೆ ಹರಿಬಿಡಲಾಗಿದೆ. ಹೀಗಾಗಿ, ರೈತರು ಭತ್ತದ ಬೆಳೆ ಬೆಳೆಯಲು ಕಪಿಲಾ ಎಡ, ಬಲ ಹಾಗೂ ಹುಲ್ಲಹಳ್ಳಿ, ರಾಂಪುರ ನಾಲೆಗಳಿಗೆ ನೀರು ಹರಿಸಲು ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು.
● ವಿದ್ಯಾಸಾಗರ್, ಜಿಲ್ಲಾಧ್ಯಕ್ಷ, ರೈತ ಸಂಘ.
ಆಷಾಢ ಕಳೆದು ಶ್ರಾವಣ ಬಂದರೂ ನೀರಾವರಿ ಸಲಹಾ ಸಮಿತಿ ಸಭೆ ಕರೆದಿಲ್ಲ. ಇನ್ನು ಸಭೆ ನಡೆಯುವವರಿಗೆ ಕಾಯದೇ ನದಿಗೆ ಬಿಡುವ ನೀರನ್ನು ನಾಲೆಗೆ ಹರಿಸಬೇಕು.
● ಶಿರಮಳ್ಳಿ ಸಿದ್ದಪ್ಪ, ಅಧ್ಯಕ್ಷ, ತಾಲೂಕು ರೈತ ಸಂಘ.
– ಶ್ರೀಧರ್ ಆರ್.ಭಟ್