Advertisement

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

10:54 PM Apr 09, 2020 | Sriram |

ಹೊಸದಿಲ್ಲಿ: ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ಥಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಯೋಜಿಸಬಹುದು, ಮುಚ್ಚಿದ ಕ್ರೀಡಾಂಗಣದಲ್ಲಿ ಟಿವಿಯಲ್ಲಿ ನೇರ ಪ್ರಸಾರದ ಮೂಲಕ ಹಣ ಸಂಗ್ರಹಿಸಿ ಕೋವಿಡ್ 19 ವಿರುದ್ಧ ಹೋರಾಡಬಹುದಿತ್ತು ಎನ್ನುವ ಪಾಕಿಸ್ಥಾನದ ಬೌಲರ್‌ ಶೋಯಿಬ್‌ ಅಖ್ತರ್‌ ಅವರ ಸಲಹೆಗೆ ಭಾರತ ಮಾಜಿ ಕ್ರಿಕೆಟಿಗ ಕಪಿಲ್‌ದೇವ್‌ ಕಿಡಿಕಿಡಿಯಾಗಿದ್ದಾರೆ. “ಸದ್ಯ ಭಾರತಕ್ಕೆ ಯಾವ ಹಣದ ಆವಶ್ಯಕತೆಯೂ ಇಲ್ಲ, ಕ್ರಿಕೆಟ್‌ ನಡೆಸಲು ಇದು ಸೂಕ್ತ ಸಮಯವೂ ಅಲ್ಲ’ ಎಂದು ಕಪಿಲ್‌ ತುಸು ಖಾರವಾಗಿಯೇ ಅಖ್ತರ್‌ಗೆ ಪ್ರತಿಕ್ರಿಯಿಸಿದ್ದಾರೆ.

Advertisement

“ಭಾರತ-ಪಾಕ್‌ನಲ್ಲಿ ಕೋವಿಡ್ 19ವೈರಸ್‌ ತಾಂಡವವಾಡುತ್ತಿದೆ. ಸಾವಿ ರಾರು ಜನರಿಗೆ ತೊಂದರೆಯಾಗಿದೆ, ಹೀಗಾಗಿ ಭಾರತ-ಪಾಕ್‌ ನಡುವೆ 3 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿ ನಡೆಸಬೇಕೆಂಬ ಅಭಿಪ್ರಾಯವನ್ನು ಅಖ್ತರ್‌ ವ್ಯಕ್ತಪಡಿಸಿದ್ದರು, ಇದಕ್ಕೆ ಕಪಿಲ್‌ದೇವ್‌ ಗರಂ ಆಗಿಯೇ ಉತ್ತರಿಸಿದ್ದಾರೆ. “ಇಂತಹ ಸಮಯದಲ್ಲಿ ಅಖ್ತರ್‌ ಹೇಳಿಕೆ ಕಾರ್ಯಸಾಧ್ಯವಲ್ಲ, ಕ್ರಿಕೆಟ್‌ ಪಂದ್ಯಕ್ಕಾಗಿ ಪ್ರಾಣವನ್ನು ಪಣಕ್ಕಿಡುವುದು ಯೋಗ್ಯವಲ್ಲ, ಅಭಿಪ್ರಾಯ ನೀಡುವುದಕ್ಕೆ ಅಖ್ತರ್‌ ಅರ್ಹರು, ಆದರೆ ಭಾರತಕ್ಕೆ ಹಣದ ಆವಶ್ಯಕತೆ ಸದ್ಯಕ್ಕಿಲ್ಲ, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ಜವಾಬ್ದಾರಿ ಹೊತ್ತವರು ಯಾವ ರೀತಿಯಲ್ಲಿ ಒಟ್ಟಾಗಿ ಕೋವಿಡ್ 19 ವಿರುದ್ಧ ಹೋರಾಡುತ್ತಾರೆ ಎನ್ನುವುದಷ್ಟೇ ನಮಗೆ ಮುಖ್ಯವಾಗುತ್ತದೆ’ ಎಂದು ಕಪಿಲ್‌ ತಿಳಿಸಿದ್ದಾರೆ.

ವೆಂಟಿಲೇಟರ್‌ ಕೊಡಿ, ಭಾರತಕ್ಕೆ ಅಖ್ತರ್‌ ಮನವಿ
ಪಾಕಿಸ್ಥಾನಕ್ಕೆ 10 ಸಾವಿರ ವೆಂಟಿಲೇಟರ್‌ ಆವಶ್ಯಕತೆ ಇದೆ, ಅದನ್ನು ನೀಡಿ ಸಹಾಯ ಮಾಡಬೇಕೆಂದು ಮಾಜಿ ಕ್ರಿಕೆಟಿಗ ಶೋಯಿಬ್‌ ಅಖ್ತರ್‌ ಭಾರತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಭಾರತ ಸಹಾಯ ಮಾಡಿದರೆ ಪಾಕಿಸ್ಥಾನ ಎಂದಿಗೂ ಮರೆಯುವುದಿಲ್ಲ ಎಂದು ಅಖ್ತರ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next