ಬೆಂಗಳೂರು: ಮಾದಕ ವಸ್ತು ಸೇವನೆಗೆ ಅವಕಾಶ ಕಲ್ಪಿಸಿದ್ದ ಹಿನ್ನೆಲೆಯಲ್ಲಿ ಪರವಾನಗಿ ರದ್ದುಪಡಿಸುವ ಸಂಬಂಧ ವಿವರಣೆ ಕೋರಿ ನಗರದ ಕೆಲ ಕಾಫಿಬಾರ್ ಹಾಗೂ ರೆಸ್ಟೋರೆಂಟ್‌ಗಳ ಮಾಲೀಕರಿಗೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಾರಿ ಮಾಡಿದ್ದ ಶೋಕಾಸ್ ನೋಟಿಸ್‌ಅನ್ನು ರದ್ದುಪಡಿಸಲು ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ಬಿಬಿಎಂಪಿ ಜಾರಿ ಮಾಡಿದ ಶೋಕಾಸ್ ನೋಟಿಸ್ ಪ್ರಶ್ನಿಸಿ ನಗರದ ಎಂ.ಜಿ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಶಿವಾಜಿನಗರ ಸೇರಿದಂತೆ ಇತರೆಡೆಯ ಕಾಫಿಬಾರ್ ಮತ್ತು ರೆಸ್ಟೋರೆಂಟ್‌ಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಸ್.ಬೊಪಣ್ಣ ಅವರಿದ್ದ ನ್ಯಾಯಪೀಠ, ಶೋಕಾಸ್ ನೋಟಿಸ್ ರದ್ದುಪಡಿಸಲು ನಿರಾಕರಿಸಿತು.
ಬಿಬಿಎಂಪಿ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಅರ್ಜಿದಾರರು ಉತ್ತರಿಸಬೇಕು. ಈ ಉತ್ತರ ಪರಿಗಣಿಸಿ ಪಾಲಿಕೆ ಅಧಿಕಾರಿಗಳು ಪ್ರಕರಣಗಳನ್ನು ಒಂದು ತಿಂಗಳಲ್ಲಿ ಇತ್ಯರ್ಥಪಡಿಸಬೇಕು. ವಿಚಾರಣೆ ವೇಳೆ ಕಾಫಿ ಬಾರ್‌ಗಳಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘನೆ ಆಗದಿದ್ದರೆ ಅವುಗಳ ಮಾಲೀಕರಿಂದ ಪಡೆದಿರುವ ದಂಡ ಮೊತ್ತವನ್ನು ಪಾಲಿಕೆ ಅಧಿಕಾರಿಗಳು ಹಿಂತಿರುಗಿಸಬೇಕು ಎಂದು ನಿರ್ದೇಶಿಸಿದ ನ್ಯಾಯಾಲಯ ಅರ್ಜಿ ಇತ್ಯರ್ಥಪಡಿಸಿತು.
ನೋಟಿಸ್ ಜಾರಿ ಏಕೆ?
ಮಾದಕ ವಸ್ತು ಬಳಸುತ್ತಿದ್ದ ನಗರದ ಕೆಲ ಹುಕ್ಕಾಬಾರ್‌ಗಳ ಮೇಲೆ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು 2016ರ ಡಿ.24 ರಂದು ದಾಳಿ ನಡೆಸಿದ್ದರು. ಈ ವೇಳೆ ಹುಕ್ಕಾ ಬಾರ್‌ಗಳಲ್ಲಿ ಮಾದಕ ವಸ್ತು ಸೇವನೆ ಕಂಡು ಬಂದಿತ್ತು. ಕೊಳೆತ ತರಕಾರಿ ಮತ್ತು ಮಾಂಸದಿಂದ ಆಹಾರ ಪದಾರ್ಥ ಸಿದ್ಧಪಡಿಸಲಾಗಿತ್ತು. ಅಲ್ಲದೆ, ನಿಷೇಧದ ಹೊರತಾಗಿಯೂ ಪ್ಲಾಸ್ಟಿಕ್ ಕವರ್‌ಗಳನ್ನು ಬಳಸುತ್ತಿದ್ದು ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಕಾಫಿಬಾರ್ ಮತ್ತು ರೆಸ್ಟೋರೆಂಟ್ ನಡೆಸಲು ನೀಡಲಾಗಿರುವ ಪರವಾನಗಿ ಏಕೆ ರದ್ದುಪಡಿಸಬಾರದು? ಎಂಬುದರ ಕುರಿತು ಉತ್ತರಿಸುವಂತೆ ಸೂಚಿಸಿ ಬಿಬಿಎಂಪಿ ಯು ಕಾಫಿಬಾರ್‌ಗಳ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಈ ನೋಟಿಸ್ ವಿರುದ್ಧ ಕಾಫಿ ಬಾರ್ ಮಾಲೀಕರು ಹೈಕೋರ್ಟ್‌ಗೆ ಹೋಗಿದ್ದರು.