ಮುಂಡರಗಿ: ಕಪ್ಪತ್ತಗುಡ್ಡದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಮತ್ತೆ, ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಕಪ್ಪತ್ತಗುಡªಲ್ಲಿರುವನೂರಾರು ಹೆಕ್ಟೇರ್ ಪ್ರದೇಶದಲ್ಲಿರುವ ಔಷಧೀಯ ಸಸ್ಯಗಳು, ಚಿಕ್ಕಪುಟ್ಟ ಗಿಡಗಂಟಿಗಳು, ಬಾದೆಹುಲ್ಲು ನಾಶವಾಗಿದೆ.
ಬೆಂಕಿ ಅವಘಡಕ್ಕೆ ಕಿಡಿಗೇಡಿಗಳ ಕೈವಾಡ ಕಾರಣವೋ ಅಥವಾ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆಯೇ ಎಂಬುದರ ಬಗ್ಗೆ ಅರಣ್ಯ ಇಲಾಖೆಯೇ ಉತ್ತರಿಸಬೇಕಿದೆ. ಜತೆಗೆ ಕಪ್ಪತ್ತಗುಡ್ಡದಲ್ಲಿರುವಗಾಳಿಯಂತ್ರಗಳಿಂದ ಸಿಡಿಯುವ ಕಿಡಿ ಬೆಂಕಿ ಹತ್ತಲು ಕಾರಣವೋ ಎನ್ನುವುದು ತನಿಖೆಯಿಂದ ಮಾತ್ರ ಹೊರ ಬರಬೇಕಿದೆ.
ಪ್ರತಿವರ್ಷ ಕಪ್ಪತ್ತಗುಡ್ಡದಲ್ಲಿ ಬೆಂಕಿಯಿಂದ ಔಷಧೀಯ ಸಸ್ಯಗಳು, ಅಪರೂಪದ ಸಸ್ಯಗಳು, ಬಾದೆಯ ಹುಲ್ಲು, ಪ್ರಾಣಿ ಪಕ್ಷಿಗಳಿಗೆ ತೊಂದರೆಯಂತೂ ತಪ್ಪುತ್ತಿಲ್ಲ. ಕಪ್ಪತ್ತ ಹಿಲ್ಸ್ ವಲಯ ಅರಣ್ಯ ಇಲಾಖೆಪ್ರತಿ ವರ್ಷ ಬೆಂಕಿ ಬೀಳದಂತೆ ಮುಂಜಾಗ್ರತಾ ಕ್ರಮ ಕೈಕೊಂಡು, ಬೆಂಕಿ ಬೇರೆಡೆಗೆ ಹರಡದಂತೆ ಬೆಂಕಿಯ (ಪೈಯರ್ )ಲೈನ್‌ಗಳನ್ನು ಹಾಕುತ್ತದೆ. ಆದರೆ, ಕಪ್ಪತ್ತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ರಭಸವಾಗಿ ಬೀಸುವ ಗಾಳಿಯಿಂದ ಹತೋಟಿಗೆ ಬಾರದೇ ಬೆಂಕಿ ಜ್ವಾಲೆ ನಿಯಂತ್ರಣ ಮೀರಿ ಆವರಿಸತೊಡಗುತ್ತದೆ.
ಆಧುನಿಕ ಉಪಕರಣ ಅಗತ್ಯ: ಕಪ್ಪತ್ತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಆಧುನಿಕ ಉಪಕರಣಗಳು, ರಾಸಾಯನಿಕ ಪುಡಿಯ ಗ್ಯಾಸ್ ಉಪಯೋಗ ಕಂಡದ್ದು ಕಡಿಮೆಯೇ ಎನ್ನಬಹುದು. ಸಿಬ್ಬಂದಿ ಬೆಂಕಿ ನಂದಿಸಲು ಗಿಡದ ತಪ್ಪಲಿನಿಂದ ಬೆಂಕಿ ಆರಿಸುವಾಗ ಬೆಂಕಿಯ ಕೆನ್ನಾಲಿಗೆ ಹಿಡತಕ್ಕೆ ಸಿಗದೇ ಆವರಿಸತೊಡಗುತ್ತದೆ. ಇದರಿಂದ ಅರಣ್ಯದಲ್ಲಿ ಬೆಂಕಿ ಆವರಿಸುವಾಗ ಸಿಬ್ಬಂದಿ ಅಸಹಾಯಕರಾಗಿ ನಿಲ್ಲಬೇಕಾಗುತ್ತದೆ.
ಬೆಂಕಿ ನಿರೋಧಕ ಬಟ್ಟೆ-ನೀರು: ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು 24 ಗಂಟೆಯೂ ಶ್ರಮಿಸುತ್ತಾರೆ. ಆದರೆ ಬೆಂಕಿಯಿಂದ ರಕ್ಷಿಸಿಕೊಳ್ಳಲುಸಿಬ್ಬಂದಿಗೆ ಬೆಂಕಿ ನಿರೋಧಕ ಬಟ್ಟೆಗಳು, ಕಾರ್ಬನ್ ಡೈಆಕ್ಸೈಡ್ ಮತ್ತು ಹೊಗೆಯಿಂದ ರಕ್ಷಿಸಿಕೊಳ್ಳಲು ಮುಖಕ್ಕೆ ಮಾಸ್ಕ್, ಕೈಗವಸುಗಳು ಬೇಕು. ಜತೆಗೆಬೆಂಕಿಯನ್ನು ನಂದಿಸುವಾಗ ವಿಪರೀತ ದಾಹ ಉಂಟಾಗುವುದರಿಂದ ಕುಡಿಯಲು ನೀರು ಕೂಡಾ ಬೇಕಾಗುತ್ತದೆ. ಕೆಲ ಸಂದರ್ಭದಲ್ಲಿ ಬೆಂಕಿ ನಂದಿಸುವಾಗ ನೀರಡಿಕೆಯಿಂದ ಸಿಬ್ಬಂದಿ ತತ್ತರಿಸುತ್ತಾರೆ.
ಗ್ರಾಮ ಅರಣ್ಯ ಸಮಿತಿ ಸಹಭಾಗಿತ್ವ ಅಗತ್ಯ: ಕಪ್ಪತ್ತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ಗ್ರಾಮ ಅರಣ್ಯ ಸಮಿತಿಗಳು, ಯುವ ಸಂಘಗಳ, ಗುಡ್ಡದ ಸುತ್ತಲಿನಲ್ಲಿರುವ ಹೊಲಗಳ ರೈತರ ಸಹಭಾಗಿತ್ವಕೂಡಾ ತುಂಬಾ ಅಗತ್ಯವಿದೆ. ಬೆಂಕಿ ನಂದಿಸಲುಸ್ಥಳೀಯರ ಸಹಕಾರ, ಸಹಭಾಗಿತ್ವ ಅಗತ್ಯ. ಏಕೆಂದರೆ,ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದರೆ ಬೆಂಕಿಯಿಂದಾಗುವ ಹೆಚ್ಚಿನ ನಷ್ಟ ತಪ್ಪಿಸಬಹುದಾಗಿದೆ.
ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ಗ್ರಾಮದ ಯುವಕರು, ರೈತರು ಸ್ವಯಂಪ್ರೇರಣೆಯಿಂದ ಬೆಂಕಿ ಆರಿಸಲು ಗುಂಪು ರಚಿಸಿಕೊಂಡು ನೀರು, ಬೆಲ್ಲದ ಜತೆಗೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿ ಬೆಂಕಿ ಆರಿಸಿ ಬರುತ್ತಿದ್ದೆವು. ಆದರೆ, ಅರಣ್ಯ ಇಲಾಖೆಯವರು ಅರಣ್ಯ ಸಮಿತಿಗಳು, ಜನರ ಜತೆಗೆಸಂವಾದ ನಡೆಸಿದರೆ ಸಹಕಾರ ಇದ್ದೇ ಇರುತ್ತದೆ. ಕಪ್ಪತ್ತಗುಡ್ಡದ ಸುತ್ತಲಿನ 32 ಹಳ್ಳಿಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಬೆಂಕಿ ಪ್ರಕರಣ ತಡೆಯಬಹುದು. ಪ್ರಸಕ್ತ ಬೆಂಕಿ ಪ್ರಕರಣದ ಸಮಗ್ರ ತನಿಖೆ ನಡೆದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. –
ಶಂಕರಗೌಡ ಜಾಯನಗೌಡರ, ಮಾಜಿ ಅಧ್ಯಕ್ಷ, ಡೋಣಿ ಗ್ರಾಪಂ
–ಹು.ಬಾ.ವಡ್ಡಟಿ