ಯುವಕ ಸಂಜಯ ಅಲಿಯಾಸ್ ಸಂಜುವಿಗೆ ಆಕಸ್ಮಿತವಾಗಿ ಕ್ಯಾಮರಾ ಒಂದು ಸಿಗುತ್ತದೆ. ಆ ಕ್ಯಾಮರಾದಲ್ಲಿರುವ ನೆಗೆಟೀವ್ಸ್ (ರೀಲ್ಸ್) ಹೊರತೆಗೆದು, ಅದರ ಪೋಟೋ ಕಾಪಿ ಪ್ರಿಂಟ್ ಹಾಕಿ ಕೊಳ್ಳುವಷ್ಟರಲ್ಲಿ, ಆ ಕ್ಯಾಮರಾದಲ್ಲಿ ಸೆರೆಯಾಗಿದ್ದ ನಿಗೂಢ ನೆಗೆಟೀವ್ ಎನರ್ಜಿಯೊಂದು ನಿಧಾನವಾಗಿ ಸಂಜುವನ್ನು ಆವರಿಸಿಕೊಳ್ಳುತ್ತದೆ. ನೋಡು ನೋಡುತ್ತಿದ್ದಂತೆ, ಸಂಜುವಿನ ಹಾವ-ಭಾವ ಎಲ್ಲವೂ ಬದಲಾಗುತ್ತ ಹೋಗುತ್ತದೆ. ಸಂಜು ಜೊತೆಯಲ್ಲಿದ್ದವರಿಗೆ ಅಗೋಚರ ಶಕ್ತಿಗಳ ಅನುಭವವಾಗಲು ಶುರುವಾಗುತ್ತದೆ. ಮಾಂತ್ರಿಕ ವಿದ್ಯೆ, ಪೈಶಾಚಿಕ ಶಕ್ತಿಗಳ ಅಬ್ಬರ ಜೋರಾಗುತ್ತಿದ್ದಂತೆ, ಅಮಾಯಕ ಜೀವಗಳ ಆಕ್ರಂದನ ಮುಗಿಲು ಮುಟ್ಟುತ್ತದೆ. ಸಂಜುವಿನ ವರ್ತನೆಗೆ ಕಾರಣ ಹುಡುಕುತ್ತ ಹೊರಟವರಿಗೆ ಒಂದೊಂದು ಇಂಟರೆಸ್ಟಿಂಗ್ ವಿಷಯಗಳು ಎದುರಾದಂತೆ, ಅದನ್ನು ತೆರೆಮೇಲೆ ನೋಡುತ್ತ ಕುಳಿತ ಪ್ರೇಕ್ಷಕರಿಗೂ “ಭಯಾನಕ’ ಅನುಭವವಾಗುತ್ತದೆ. ಅದನ್ನು ಸ್ವತಃ ಅನುಭವಕ್ಕೆ ತಂದುಕೊಳ್ಳುವ “ಡೇರ್’ ಇದ್ದರೆ, ಈ ವಾರ ತೆರೆಕಂಡಿರುವ “ಡೆವಿಲ್’ ಸಿನಿಮಾ “ಕಪಾಲ’ವನ್ನು ನೋಡಬಹುದು.
ಮೊದಲೇ ಹೇಳಿದಂತೆ “ಕಪಾಲ’ ಔಟ್ ಆ್ಯಂಡ್ ಔಟ್ ಹಾರರ್-ಥ್ರಿಲ್ಲರ್ ಸಿನಿಮಾ. ವಾಮಾಚಾರ, ಮಾಂತ್ರಿಕ ವಿದ್ಯೆ, ಹೆಣ್ಣಿನ ಸೇಡು, ಅತೃಪ್ತ ಆತ್ಮಗಳ ಆರ್ಭಟ ಹೀಗೆ ಒಂದಷ್ಟು ಹಾರರ್ ಅಂಶಗಳನ್ನು ಇಟ್ಟುಕೊಂಡು ಅದನ್ನು ಒಂದು ನವಿರಾದ ಕಥೆಯ ಮೂಲಕ ತೆರೆಮೇಲೆ ತಂದಿದ್ದಾರೆ ಯುವ ನಿರ್ದೇಶಕ ವಿನಯ್ ಯದುನಂದನ್.
ಬಹುತೇಕ ಹಾರರ್ ಸಿನಿಮಾಗಳಲ್ಲಿರುವಂಥೆ ದೆವ್ವ, ಭೂತ, ಪ್ರೇತ, ಪಿಶಾಚಿಗಳ ಅಬ್ಬರ ಈ ಸಿನಿಮಾದಲ್ಲೂ ಇದೆ. ಆದರೆ ಅದೆಲ್ಲದಕ್ಕೂ ಕಥೆಯಲ್ಲಿ ಒಂದು ಲಾಜಿಕ್ ಕೊಟ್ಟು, ಪ್ರೇಕ್ಷಕರನ್ನು ಒಪ್ಪಿಸುವ ಕೆಲಸ ಚಿತ್ರಕಥೆಯಲ್ಲಿ ಮಾಡಲಾಗಿದೆ. ಕಥೆಗೆ ತಕ್ಕಂತೆ ವೇಗವಾಗಿ ಸಾಗುವ ಚಿತ್ರಕಥೆ, ಕ್ಷಣ-ಕ್ಷಣಕ್ಕೂ ಎದುರಾಗುವ ಅನಿರೀಕ್ಷಿತ ತಿರುವುಗಳು ಪ್ರೇಕ್ಷಕರನ್ನು ಕೊನೆವರೆಗೂ ಹಿಡಿದು ಕೂರಿಸಲು ಯಶಸ್ವಿಯಾಗಿದೆ.
ಇನ್ನು ಅಶೋಕ್ ಹೆಗ್ಡೆ, ಬಿ. ಎಂ ಗಿರಿರಾಜ್, ಯಮುನಾ ಶ್ರೀನಿಧಿ ಅವರನ್ನು ಹೊರತುಪಡಿಸಿದರೆ, ಬಹುತೇಕ ಹೊಸ ಪ್ರತಿಭೆಗಳೆ “ಕಪಾಲ’ದಲ್ಲಿ ತೆರೆಮೇಲೆ ಕಾಣುತ್ತಾರೆ. ಅಭಿಮನ್ಯು ಪ್ರಜ್ವಲ್, ಆರ್ಯನ್ ಚೌಧರಿ, ಸುಷ್ಮಾ ಗೌಡ, ಪ್ರತೀಕ್ಷಾ ಗೌಡ ಹೀಗೆ ಬಹುತೇಕರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಒಟ್ಟಾರೆ, ನೋಡುಗರನ್ನು ಕೂತಲ್ಲಿಯೇ ಬೆಚ್ಚಿಬೀಳುಸುವಂತೆ ಮಾಡುವಲ್ಲಿ “ಕಪಾಲ’. ಹಾರರ್-ಥ್ರಿಲ್ಲರ್ ಸಿನಿಮಾಗಳಲ್ಲಿ ಛಾಯಾಗ್ರಹಣ, ಲೈಟಿಂಗ್, ಎಡಿಟಿಂಗ್, ರೀ-ರೆಕಾರ್ಡಿಂಗ್ ಕೆಲಸಗಳೇ ಸಿನಿಮಾದ ಜೀವಾಳ. ಅದರಂತೆ “ಕಪಾಲ’ ಸಿನಿಮಾದಲ್ಲಿ ಪ್ರವೀಣ್ ಎಂ. ಪ್ರಭು ಛಾಯಾಗ್ರಹಣ , ಶಾಂತ ಕುಮಾರ್ ಸಂಕಲನ, ಸಚಿನ್ ಬಸ್ರೂರ್ ರೀ-ರೆಕಾರ್ಡಿಂಗ್ ಪ್ರೇಕ್ಷಕರನ್ನು ಅಲ್ಲಲ್ಲಿ ಬೆಚ್ಚಿಬೀಳಿಸಲು ಯಶಸ್ವಿಯಾಗಿದೆ.
ಕಾರ್ತಿಕ್