Advertisement

ಡಿ.ಕೆ.ಶಿವಕುಮಾರ್‌ಗೆ ಕಪಾಲ ಬೆಟ್ಟದ ಕಾಟ

10:03 AM Dec 30, 2019 | Lakshmi GovindaRaj |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಅಧ್ಯಕ್ಷ ಗಾದಿಗೆ ಪೈಪೋಟಿಯಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಕಪಾಲಿ ಬೆಟ್ಟವೇ ಕಂಟಕವಾಗಲಿದೆ ಎನ್ನಲಾಗುತ್ತಿದೆ. ಡಿ.ಕೆ.ಶಿವಕುಮಾರ್‌, ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಿರುವ ಜಾಗವು ಗೋಮಾಳ ಭೂಮಿ.

Advertisement

ಅದನ್ನು ಅನ್ಯ ಉದ್ದೇಶಕ್ಕೆ ಬಳಸಲು ಮುಂದಾಗಿರುವುದು ಅಕ್ಷಮ್ಯ ಎಂದು ಆರೋಪಿಸುತ್ತಿರುವ ಬಿಜೆಪಿ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಸೋನಿಯಾ ಗಾಂಧಿ ಅವರನ್ನು ಓಲೈಸಿ ಪಕ್ಷದ ಅಧ್ಯಕ್ಷ ಗಾದಿಗೇರಲು ಶಿವಕುಮಾರ್‌ ಪ್ರಯತ್ನಿಸುತ್ತಿದ್ದಾರೆ’ ಎಂದೂ ದೂರುತ್ತಿದೆ. ಡಿ.ಕೆ. ಶಿವಕುಮಾರ್‌ ಅವರ ವಿರೋಧಿ ಬಣಕ್ಕೆ ಇದು ಅಸ್ತ್ರವಾಗಬಹುದು. ಈ ಹಿನ್ನೆಲೆಯಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ರೇಸ್‌ನಲ್ಲಿರುವ ಪ್ರಮುಖರು: ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್‌, ಈಶ್ವರ ಖಂಡ್ರೆ, ಹಿಂದುಳಿದ ವರ್ಗದಿಂದ ಬಿ.ಕೆ.ಹರಿಪ್ರಸಾದ್‌ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ. ಒಂದು ವೇಳೆ, ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ಸ್ಥಾನ ನೀಡಿದರೆ, ಅಷ್ಟೇ ಪ್ರಮುಖ ಹುದ್ದೆಯಾದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೂಡ ಹಿಂದುಳಿದ ವರ್ಗದ ಪಾಲಾಗುವುದು ಅನುಮಾನ. ಈ ನಿಟ್ಟಿನಲ್ಲಿ ಹರಿಪ್ರಸಾದ್‌ಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ಈ ಮಧ್ಯೆ, ಡಿ.ಕೆ. ಶಿವಕುಮಾರ್‌ ಅವರನ್ನು ಕಪಾಲ ಬೆಟ್ಟದ ವಿವಾದ ಸುಳಿ ಸುತ್ತಿಕೊಂಡಿದೆ. ಈಗಾಗಲೇ ತೆರಿಗೆ ವಂಚನೆ ಆರೋಪದ ಸುಳಿಯಲ್ಲಿ ಅವರಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಿಧಾನಸಭೆ ಪ್ರತಿಪಕ್ಷ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾದ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್‌ ಮಿಸ್ತ್ರಿ ಖುದ್ದು ಭೇಟಿ ನೀಡಿ, ಅಭಿಪ್ರಾಯ ಸಂಗ್ರಹಿಸಿ, ಹೈಕಮಾಂಡ್‌ಗೆ ವರದಿ ಒಪ್ಪಿಸಿದ್ದಾರೆ.

ಹಾಗಾಗಿ, ಆಯ್ಕೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಂಗಳದಲ್ಲಿದೆ. ಎರಡೂ ಸ್ಥಾನಗಳಿಗೆ ತೀವ್ರ ಪೈಪೋಟಿ ಉಂಟಾಗಿರುವುದರಿಂದ ಹೈಕಮಾಂಡ್‌ಗೂ ಇದು ಗೊಂದಲದ ಗೂಡಾಗಿ ಏರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ಸ್ಥಾನ ನೀಡುವಂತೆ ಅವರ ಬೆಂಬಲಿಗರು ಹೈಕಮಾಂಡ್‌ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಪಕ್ಷದ ಹಿರಿಯರು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯಗೆ ನೀಡಬಾರದು.

Advertisement

ಪಕ್ಷದ ಹಿತದೃಷ್ಟಿಯಿಂದ ಅವರ ಸರ್ವಾಧಿಕಾರಿ ಧೋರಣೆಗೆ ಈಗಲೇ ಕಡಿವಾಣ ಹಾಕಬೇಕು. ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಅವರನ್ನು ಸೀಮಿತಗೊಳಿಸಬೇಕು. ಅಲ್ಲದೆ, ಒಬ್ಬರಿಗೆ ಎರಡೆರಡು ಹುದ್ದೆಗಳು ಬೇಡ; ಒಂದು ಹುದ್ದೆ ಸಾಕು. ಆ ಒಂದು ಹುದ್ದೆ ಕೂಡ ಶಾಸಕಾಂಗ ಪಕ್ಷದ ನಾಯಕನ ಸ್ಥಾನವೇ ಆಗಿರಲಿ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.

ಈ ಸಂಬಂಧ ವರಿಷ್ಠರ ಮೇಲೆ ಒತ್ತಡ ಹಾಕಲಾಗುತ್ತಿದೆ. ಸೋನಿಯಾ ಗಾಂಧಿ ಕೂಡ ಈ ಹಿರಿಯರ ಪರ ಒಲವು ತೋರಿದ್ದು, ಸಿದ್ದರಾಮಯ್ಯ ಅವರಿಗೆ ಯಾವುದಾದರೂ ಒಂದು ಹುದ್ದೆ (ಶಾಸಕಾಂಗ ಪಕ್ಷದ ನಾಯಕ ಸ್ಥಾನ?)ಗೆ ಸೀಮಿತಗೊಳಿಸುವ ಯೋಚನೆಯಲ್ಲಿದ್ದಾರೆ. ಇದನ್ನು ಮನಗಂಡ ಸಿದ್ದರಾಮಯ್ಯ ಬೆಂಬಲಿಗರ ಗುಂಪು, ರಾಹುಲ್‌ ಗಾಂಧಿ ಮೂಲಕ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ.

ಈ ಗುಂಪಿನಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡ ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌ ಮತ್ತಿತರರು ಕೂಡ ಇದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಯಾವ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಹಾಗೊಂದು ವೇಳೆ, ಶಾಸಕಾಂಗ ಪಕ್ಷದ ನಾಯಕ ಸ್ಥಾನ ನೀಡಿದರೆ, ಅದರಿಂದ ಮಾಜಿ ಮುಖ್ಯಮಂತ್ರಿಗೆ ಪರೋಕ್ಷವಾಗಿ ಹಿನ್ನಡೆ ಆದಂತಾಗುತ್ತದೆ.

ಅದು ಅವರ ಮುಂದಿನ ರಾಜಕೀಯ ನಡೆಯನ್ನೂ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪ್ರತಿಪಕ್ಷದ ನಾಯಕ ಸ್ಥಾನ ಪಟ್ಟ ನೀಡಿದರೆ, ಚುನಾವಣೆಗಳಲ್ಲಿನ ಸೋಲುಗಳ ನಡುವೆಯೂ ಸಿದ್ದರಾಮಯ್ಯ ಅವರ ಬಿಗಿಹಿಡಿತ ಹೊಂದಿರುವುದು ಮತ್ತೂಮ್ಮೆ ಸಾಬೀತಾಗುತ್ತದೆ. ಆದರೆ, ಇದರ ಪರಿಣಾಮಗಳು ಹಲವು ರೀತಿಯಲ್ಲಿ ಪಕ್ಷದ ಮೇಲೆ ಆಗಲಿದೆ. ಈಚೆಗೆ ನಡೆದ ಉಪಚುನಾವಣೆ ಪ್ರಚಾರದಲ್ಲಿಯೇ ಅದರ ಸುಳಿವು ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next