Advertisement

ಕಾಣಿಯೂರು ರೈಲು ನಿಲ್ದಾಣ: ಉಚಿತ ಪ್ರಯಾಣ ಖಚಿತ!

03:45 AM Jul 06, 2017 | Team Udayavani |

ಸವಣೂರು: ಕಬಕ- ಪುತ್ತೂರು ರೈಲು ನಿಲ್ದಾಣದಿಂದ ನೆಟ್ಟಣ ಮಾರ್ಗ ವಾಗಿ 19 ಕಿ.ಮೀ. ದೂರದಲ್ಲಿರುವ ಕಾಣಿಯೂರು ರೈಲು ನಿಲ್ದಾಣದಿಂದ ಪ್ರಯಾಣಿಕರು ಉಚಿತವಾಗಿ ರೈಲಿನಲ್ಲಿ ಪ್ರಯಾಣಿಸಬಹುದು. 

Advertisement

ಖಂಡಿತ ಇದು ರೈಲ್ವೇ ಇಲಾಖೆಯ ವರ ಪ್ರಕಟನೆಯಲ್ಲ. ಆದರೆ, ಅಲ್ಲಿರುವ ನೈಜ ಪರಿಸ್ಥಿತಿ. ಕಾರಣ ಕಾಣಿಯೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ನೀಡುವವರಿಲ್ಲ. ಹೀಗಾಗಿ ಇಲ್ಲಿನ ರೈಲು ಪ್ರಯಾಣಿಕರಿಗೆ ಉಚಿತ ಪ್ರಯಾಣದ ಭಾಗ್ಯ.

ರೈಲ್ವೇ ಇಲಾಖೆ ವೈಫಲ್ಯ 
ಇಲಾಖೆಯ ಈ ವೈಫ‌ಲ್ಯ ಕೆಲವರಿಗೆ ಖುಷಿಗೆ ಕಾರಣವಾದರೆ, ಮತ್ತೆ ಕೆಲವರಿಗೆ ಆತಂಕಕ್ಕೆ ಕಾರಣವಾಗಿದೆ. ಪ್ರಯಾಣದ ವೇಳೆ ಟಿಕೆಟ್‌ ಪರೀಕ್ಷಕರು ಬಂದು (ಟಿಟಿಇ-ಟ್ರಾವೆಲಿಂಗ್‌ ಟಿಕೆಟ್‌ ಎಕ್ಸಾಮಿನರ್‌) ಪರಿಶೀಲಿಸಿದರೆ ಏನು ಮಾಡುವುದೆಂಬ ಆತಂಕ ಇದ್ದೇ ಇದೆ. ಇದರೊಂದಿಗೆ ಒಂದುವೇಳೆ ಹಾಗೆ ಸಿಕ್ಕು ಬಿದ್ದರೂ ದಂಡ ಪಾವತಿಸ ಬೇಕಿಲ್ಲ. ಪ್ರಯಾಣ ದರವನ್ನು ನೀಡಿದರೆ ಸಾಕೆಂಬ ಖುಷಿಯ ಸಂಗತಿಯೂ ಇದೆ. ಯಾರೂ ಬಾರದಿದ್ದರೆ ಉಚಿತ ಪ್ರಯಾಣ.

ಹೇಗೆ ಉಚಿತ ಪ್ರಯಾಣ
ಈ ನಿಲ್ದಾಣದಲ್ಲಿ ಸ್ಥಳೀಯರಾದ ಅನಂತರಾಮ ಉಪಾಧ್ಯಾಯ ಹಾಗೂ ಬಳಿಕ ವಸಂತ ಅನಿಲ ಅವರು  ರೈಲ್ವೇ ಇಲಾಖೆಯಿಂದ ಟಿಕೆಟ್‌ ಹಂಚಿಕೆಯ ಟೆಂಡರ್‌ ಪಡೆದು ಕೌಂಟರ್‌ನಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ವಿತರಿಸುತ್ತಿದ್ದರು. ಆದರೆ, ಅವರ ಟೆಂಡರ್‌ ಅವಧಿ ಮುಗಿದು ಆರು ತಿಂಗಳು ಕಳೆದರೂ ಹೊಸಬರ್ಯಾರೂ ಬಂದಿಲ್ಲ. ಇಲಾಖೆಯೂ ಟೆಂಡರ್‌ ಕರೆದಿಲ್ಲ. ಹಾಗಾಗಿ ಬೇರೆಯವರಿಗೆ ಗುತ್ತಿಗೆ ನೀಡುವವರೆಗೆ ಈ ಉಚಿತ ಪ್ರಯಾಣ ಭಾಗ್ಯ ಮುಂದುವರಿಯಲಿದೆ.
 
ಹೀಗಿದೆ ಪ್ರಯಾಣ ವೆಚ್ಚ
ಕಾಣಿಯೂರಿನಿಂದ ನೆಟ್ಟಣಕ್ಕೆ 10 ರೂ., ಕಾಣಿಯೂರಿನಿಂದ ಪುತ್ತೂರಿಗೆ 10 ರೂ., ಕಾಣಿಯೂರಿನಿಂದ ಮಂಗಳೂರಿಗೆ 20 ರೂ. ಇದೆ. ಕಾಣಿ ಯೂರಿನಿಂದ ಮಂಗಳೂರಿಗೆ ಬಸ್‌ನಲ್ಲಿ ಪ್ರಯಾಣಿಸುವುದಾದರೆ 70 ರೂ. ವೆಚ್ಚವಾಗಲಿದೆ. ಆದ್ದರಿಂದ ರೈಲಿನಲ್ಲಿ ಪ್ರಯಾಣಿಸುವವರೇ ಅಧಿಕ. ನಿಲ್ದಾಣದಲ್ಲಿಯೇ ಟಿಕೆಟ್‌ ನೀಡಲು ಕೊಠಡಿಯೊಂದಿದೆ. ಈ ಕೊಠಡಿಗೆ ಬೀಗದ ವ್ಯವಸ್ಥೆಯಿಲ್ಲದೇ ಅನೈತಿಕ ಚಟುವಟಿಕೆಗಳ ಆಶ್ರಯ ತಾಣ ವಾಗಬಹುದೆನ್ನುವುದು ಸ್ಥಳೀಯರ ಆತಂಕ.

– ಪ್ರವೀಣ್‌ ಚೆನ್ನಾವರ

Advertisement
Advertisement

Udayavani is now on Telegram. Click here to join our channel and stay updated with the latest news.

Next