Advertisement

ಕನ್ಯಾನ ದ.ಕ. ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ. ಶಾಲೆಗೆ 105 ವರ್ಷ

12:07 AM Nov 12, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ವಿಟ್ಲ : ಕನ್ಯಾನ ಗ್ರಾಮದ ಹೃದಯ ಭಾಗದಲ್ಲಿ ಮುಳಿಹುಲ್ಲಿನ ಛಾವಣಿ, ಮಣ್ಣಿನ ಗೋಡೆಯ ಕಟ್ಟಡದಲ್ಲಿ ಅಂಗಡಿ ಮುಂಗಟ್ಟುಗಳ ಜಾಗದಲ್ಲಿ ಪಂಜಜೆ ಮನೆತನದವರು ಈ ಶಾಲೆಯನ್ನು ಆರಂಭಿಸಿದರು. ದಿ| ಪಂಜಜೆ ತಿಮ್ಮಪ್ಪ ಭಟ್‌, ದಿ| ಪಂಜಜೆ ಸುಬ್ರಾಯ ಭಟ್‌ ಶಾಲೆಯ ಸ್ಥಾಪನೆಗೆ ಕಾರಣಕರ್ತರು. ದಿ| ಪಂಜಜೆ ತಿಮ್ಮಪ್ಪ ಭಟ್‌ ಸ್ಥಳದಾನ ಮಾಡಿ ನೂತನ ಕಟ್ಟಡ ನಿರ್ಮಿಸಿಕೊಟ್ಟರು. ಆಗ ಶ್ರೀ ಪಂಜಜೆ ತಿಮ್ಮಣ್ಣ ಭಟ್ಟ ಬೋರ್ಡು ಎಲಿಮೆಂಟರಿ ಶಾಲೆ ಎಂದು ಹೆಸರಿತ್ತು. ದಿ| ಮೊಳಹಳ್ಳಿ ಶಿವರಾಯರು ಕೂಡ ಶಾಲೆಯ ಸ್ಥಾಪನೆಗೆ ನೆರವಾಗಿದ್ದರು. ವಿ. ತುಕ್ರಪ್ಪ ಶೆಟ್ಟಿ, ಕಮ್ಮಜೆ ಕೃಷ್ಣ ಭಟ್‌, ಡಾ| ವಿ. ಮಹಾದೇವ ಶಾಸ್ತ್ರಿ, ಪಂಜಜೆ ಶಂಕರ ಭಟ್‌, ಡಿ. ಪಕೀರ ಶೆಟ್ಟಿ, ನೀರ್ಪಾಜೆ ಭೀಮ ಭಟ್‌ ಮತ್ತಿತರರು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದವರು.

ಕರ್ನಾಟಕ ಪಬ್ಲಿಕ್‌ ಶಾಲೆ
1931ರಲ್ಲಿ ಹೈಯರ್‌ ಎಲಿಮೆಂಟರಿ ಶಾಲೆಯಾಗಿ ಪರಿವರ್ತನೆಯಾಯಿತು. ಆಗ ಮುಖ್ಯೋಪಾಧ್ಯಾಯರು ಹಟ್ಟಂಗಡಿ ಶಿವರಾಯರು. ಪುತ್ತೂರು ತಾಲೂಕು ಬೋರ್ಡ್‌ನ ಮೂಲಕ ಶಾಲೆ ಮೇಲ್ದರ್ಜೆಗೇರಿದೆ. 2012ರಲ್ಲಿ 8ನೇ ತರಗತಿ ಆರಂಭವಾಗಿ ಉನ್ನತೀಕರಿಸಿದ ಶಾಲೆಯಾಯಿತು. 2018ರಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆಗಿ ಪರಿವರ್ತನೆಗೊಂಡಿತು. ಕರೋಪಾಡಿ ಮತ್ತು ಕೇರಳ ಗಡಿಭಾಗದ ವಿದ್ಯಾರ್ಥಿಗಳೂ ಈ ಶಾಲೆಗೆ ಬರುತ್ತಿದ್ದರು. ಬಳಿಕ ಗ್ರಾಮದ ಬಂಡಿತ್ತಡ್ಕ, ಕಣಿಯೂರು, ದೇಲಂತಬೆಟ್ಟು, ಮಿತ್ತನಡ್ಕ, ಪದ್ಯಾಣ, ಒಡಿಯೂರು, ಮೊದಲಾದೆಡೆ ಸರಕಾರಿ ಶಾಲೆಗಳು ಆರಂಭವಾಗಿತ್ತು. ಈಗ ಈ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳೂ ಸಾಕಷ್ಟಿವೆ.

ಶಿವರಾಮ ಕಾರಂತರ ಮಕ್ಕಳ ಕೂಟ
ಶಿವರಾಮ ಕಾರಂತರು ಈ ಶಾಲೆಗೆ 1935ರಲ್ಲಿ ಬಂದು ಮಕ್ಕಳ ಕೂಟ ಏರ್ಪಡಿಸಿದ್ದರು. ಆಗ ಸಾಹಿತಿ ದಿ| ನಿರಂಜನ ಮತ್ತಿತರರು ಮಕ್ಕಳ ಕೂಟದಲ್ಲಿ ಭಾಗವಹಿಸಿದ್ದರು. 1993ರಲ್ಲಿ ನೀರ್ಪಾಜೆ ಭೀಮ ಭಟ್‌ ಅವರ ನೇತೃತ್ವದಲ್ಲಿ ಶಾಲೆಯ ಅಮೃತ ಮಹೋತ್ಸವ ನಡೆದಿತ್ತು. ಆಗ ಶಿವರಾಮ ಕಾರಂತರು, ಆಗಿನ ಉಪಕುಲಪತಿ ಪ್ರೊ|ಎಂ.ಐ. ಸವದತ್ತಿ ಭಾಗವಹಿಸಿದ್ದರು. ಕಯ್ನಾರ ಕಿಂಞ್ಞಣ್ಣ ರೈ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯೂ ನಡೆದಿತ್ತು.

ಹಳೆ ವಿದ್ಯಾರ್ಥಿಗಳು
ಮಾಜಿ ಶಾಸಕ ದಿ| ಸುಬ್ಬಯ ನಾಯಕ್‌, ಪ್ರೊ| ಜಿ. ರಘುನಾಥ ರೈ, ಡಾ| ಎಂ.ಬಿ. ಮರಕಿಣಿ, ಡಾ| ನಾ. ಮೊಗಸಾಲೆ, ಅಂಶುಮಾಲಿ, ಡಾ| ಅಬ್ದುಲ್‌ಹಮೀದ್‌, ದಿ| ಶಿರಂಕಲ್ಲು ಈಶ್ವರ ಭಟ್‌, ಹಾಸ್ಯನಟ ಅಂಗ್ರಿ ಗಣಪತಿ ಭಟ್‌, ದಿ| ಸಂಕಪ್ಪ ಗೌಡ ಮತ್ತಿತರರು.

Advertisement

ಹಿಂದಿನ ಮುಖ್ಯ ಶಿಕ್ಷಕರು
ಲಕ್ಷ್ಮಣ ಕಾಮತ್‌, ವಾಸುದೇವ ಕಾರಂತ, ತೆಂಕಬೈಲು ಸುಬ್ಬಣ್ಣ ಭಟ್‌, ಹಟ್ಟಂಗಡಿ ಶಿವ ರಾವ್‌, ಕಲ್ಯಾಣಪುರ ಸಂಜೀವ ರಾವ್‌, ಎಂ.ನಾರಾಯಣ ಪಡ್ಡಿಲ್ಲಾಯ, ಪಂಜಜೆ ಶಂಕರ ಭಟ್‌, ಕಾಡೂರು ಈಶ್ವರ ಭಟ್‌, ವಿ.ಶಾಂತಪ್ಪ ನಾಯ್ಕ, ಸಿಸಿಲಿಯ ಗೊನ್ಸಾಲ್ವಿಸ್‌, ಪಿದಮಲೆ ಕೃಷ್ಣ ಭಟ್‌, ಪಿ.ಗಣಪತಿ ಭಟ್‌, ಕೆ.ನಾರಾಯಣ ಭಟ್‌, ಸಂಜೀವ ಪಕಳ, ಎನ್‌.ಗಣಪತಿ ಭಟ್‌, ಕೆ. ಶಂಕರ ಪಾಟಾಳಿ, ಐತ್ತಪ್ಪ ನಾಯ್ಕ, ಯು. ದೇವಪ್ಪ ನಾಯ್ಕ(ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು.

ಸರಕಾರದ ಅನುದಾನ ಬಂದಿದೆ. ಕಲಿಕೆಯ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗಿದೆ. ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ, ಪಂ.ನ ಎಲ್ಲ ಜನಪ್ರತಿನಿಧಿಗಳ ಸಹಕಾರ ಸಿಕ್ಕಿದೆ. ಶೌಚಾಲಯ ಕೊರತೆಯಿದೆ. ಎಂ.ಆರ್‌. ಪಿ.ಎಲ್‌.ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆಗಿ ಮೇಲ್ದರ್ಜೆಗೇರಿದೆ. ಮಕ್ಕಳ ಸಂಖ್ಯೆ ಉತ್ತಮವಾಗಿದೆ.
-ಬಾಬು ನಾಯ್ಕ ಬಿ.,ಮುಖ್ಯ ಶಿಕ್ಷಕರು.

ನಾನು 6ನೇ ತರಗತಿಯ ಲ್ಲಿದ್ದಾಗ ಮುಖ್ಯ ಶಿಕ್ಷಕರಾಗಿದ್ದ ಪಂಜಜೆ ಶಂಕರ ಭಟ್‌ ಅವರು ಬರೆಯಲು ಪ್ರೇರೇಪಿಸಿದ್ದರು. ಉತ್ತಮ ಬರಹಗಳನ್ನು ಹಸ್ತಪ್ರತಿಗಳನ್ನಾಗಿಸಿದರು. ನೀರ್ಪಾಜೆ ಭೀಮ ಭಟ್‌ ಅವರು ಹಸ್ತಪ್ರತಿ ಬಿಡುಗಡೆಗೊಳಿಸಿದರು. ಈ ಪ್ರೇರಣೆಯಿಂದ‌ ನಾವು ಸಾಹಿತಿ, ಕವಿಗಳಾದೆವು.
-ಅಂಶುಮಾಲಿ (ಭಾಸ್ಕರ ಕೆ.),
ಕವಿ, ನಾಟಕಕಾರ
ಹಿರಿಯ ವಿದ್ಯಾರ್ಥಿ.

-  ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next