“ಕಾನೂನು ಅಸ್ತ್ರ’- ಹೀಗೊಂದು ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದೆ. ಈ ಹಿಂದೆ ಡಿಸೆಂರ್ಬ 24 ಎಂಬ ಚಿತ್ರವನ್ನು ನಿರ್ದೇಶಿಸಿದ್ದ ನಾಗರಾಜ್ ಎಂ.ಜಿ.ಗೌಡ ಅವರು ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಸಮಾಜದಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದವರು ಹೇಗೆ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಅಸ್ತ್ರ ಉಪಯೋಗಿಸಿಕೊಂಡು ಅದರಿಂದ ಹೇಗೆ ಪಾರಾಗಬಹುದು ಎಂದು ಈ ಚಿತ್ರದಲ್ಲಿ ಹೇಳಲಾಗಿದೆ.
ಮಧ್ಯಮವರ್ಗದ ಜನ ವಾಹನ ಸಾಲ ಪಡೆದುಕೊಂಡು, ಕಂತು ಕಟ್ಟುವುದು ಸ್ವಲ್ಪ ತಡವಾದರೂ ಅವರ ಮೇಲೆ ಸೀಜ್ ಮಾಡುವವರು ನಡೆಸುವ ದೌರ್ಜನ್ಯ, ಗೃಹ ಸಾಲ ಪಡೆದವರ ಮೇಲೆ ಬ್ಯಾಂಕ್‌ಗಳು ಬೇಕಾಬಿಟ್ಟಿ ಬಡ್ಡಿ ವಿಧಿಸುವಿಕೆ, ಸಾಲ ಪಡೆಯುವಾಗ ಖಾಲಿ ಚೆಕ್ ನೀಡಿದರೆ ಆಗುವ ಪರಿಣಾಮಗಳು, ಗಂಡ ಹೆಂಡತಿ ನಡುವಿನ ಸಂಸಾರ ಕಲಹಗಳು, ಡೈವೊರ್ಸ್‌ಗೆ ಕಾರಣಗಳು, ನಿರಪರಾಧಿಯ ಮೇಲೆ ಕೊಲೆ ಅಪರಾಧ ಬಂದಾಗ ಕಾನೂನು ಅಂತಹವರನ್ನು ಹೇಗೆ ಸಂರಕ್ಷಿಸುತ್ತದೆ ಎಂಬ ಹಲವಾರು ಅಂಶಗಳನ್ನು ಹೇಳುವ ಚಿತ್ರವೇ “ಕಾನೂನು ಅಸ್ತ್ರ’.
ಬಡವ, ಶ್ರೀಮಂತ, ಗಂಡು, ಹೆಣ್ಣು, ಸಾಲದ ಸುಳಿಯಿಂದ ಪಾರಾಗುವುದಕ್ಕೆ “ಕಾನೂನು ಅಸ್ತ್ರ’ ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ಹೇಳುವ ಪ್ರಯತ್ನವಿದು. ಜೂ. 15ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು. ಪುಟ್ಟೇಗೌಡ ಎನ್. ಅವರು ಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ.
ನಾಗರಾಜ್ ಎಂ.ಜಿ. ಗೌಡ ನಿರ್ದೇಶನ ಮಾಡುತ್ತಿದ್ದು, ವೆಂಕಿ ಯು.ಡಿ.ವಿ. ಅವರ ಸಂಕಲನ, ವಿನಯ್ ಗೌಡ ಅವರ ಛಾಯಾಗ್ರಹಣ, ಚಿತ್ರದ 5 ಹಾಡುಗಳಿಗೆ ಮಂಜು ಮಹದೇವ್ ಅವರ ಸಂಗೀತ, ಚಂದ್ರು ಬಂಡೆ ಅವರ ಸಾಹಸ, ಬಾಲು ಅವರ ಕೊರಿಯೋಗ್ರಫಿ ಇದೆ. ಪುಟ್ಟೇಗೌಡ. ಎನ್, ಜಗದೀಶ್. ಹೆಚ್.ಜಿ. ದೊಡ್ಡಿ,ಬಾಬು. ಬಿ.ಬಿ.ಆರ್, ಲಕ್ಷ್ಮೀ ನಾರಾಯಣ್, ಕವಿತಾ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.