Advertisement
ಕಾಂತಾವರ ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುತ್ತಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 856 ಕುಟುಂಬಗಳು ಇವೆ. 699 ಕುಟುಂಬಗಳು ಉದ್ಯೋಗ ಖಾತರಿ ಯೋಜನೆ ಯಡಿ ಉದ್ಯೋಗ ಚೀಟಿಯನ್ನು ಪಡೆದುಕೊಂಡಿದ್ದಾರೆ.
Related Articles
Advertisement
ಕಾಲುವೆಯಲ್ಲಿ ಹೂಳು ತುಂಬಿ ಗದ್ದೆಗೆ ನೀರು ಹರಿಯುತ್ತಿತ್ತು ಇದರಿಂದ ಬೆಳೆಗಳು ಕೈ ಸೇರುತ್ತಿರಲಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದಲ್ಲಿ ಕಾಲುವೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದೀಗ ನೀರು ಸರಾಗವಾಗಿ ಹರಿಯುತ್ತಿದ್ದು ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಉಪಯೋಗವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.
ಗ್ರಾಮಸ್ಥರು ಗ್ರಾ.ಪಂ.ಗೆ ಭೇಟಿ ನೀಡಿದ ಸಂದರ್ಭ ಅಧಿಕಾರಿಗಳು ಹಾಗೂ ಸಿಬಂದಿ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ನೀಡುತ್ತಿದ್ದರು. ಇದನ್ನು ಗ್ರಾಮಸ್ಥರು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ 3 ತಂಡ ಕೆರೆ, ಕಾಲುವೆ ಅಭಿವೃದ್ಧಿಗೊಳಿಸಿ ಗಮನ ಸೆಳೆದಿದ್ದಾರೆ. ಕೆಲಸಕ್ಕೆ ತಕ್ಕಂತೆ ಕೂಲಿ, ಸಾಮಗ್ರಿ ಮೊತ್ತ ಪಾವತಿಯಾಗಿದೆ.
5,375 ಗುರಿ ನಿಗದಿ: ಶೇ.100 ಗುರಿ ಸಾಧನೆ :
ಕಾಂತಾವರ ಗ್ರಾ.ಪಂ.ಗೆ ವಾರ್ಷಿಕವಾಗಿ 5,375 ಗುರಿ ನಿಗದಿಪಡಿಸಿದ್ದು ಫೆಬ್ರವರಿ ಅಂತ್ಯಕ್ಕೆ ಶೇ.100 ಗುರಿ ಸಾಧಿಸಲಾಗಿದೆ. ಈ ಯೋಜನೆಯ ಅನುದಾನದಿಂದ ಮನೆ ಮನೆಗೆ ಬಚ್ಚಲು ಗುಂಡಿ, ಬಾವಿ, ಕೆರೆಗಳ ಹೂಳೆತ್ತುಕೆ, ರಸ್ತೆ ಬದಿ ನೆಡುತೋಪು ನಿರ್ಮಾಣ, ದನದ ಹಟ್ಟಿ, ಎರೆಹುಳು ತೊಟ್ಟಿ, ಗೊಬ್ಬರ ಗುಂಡಿ, ಅಡಿಕೆ ತೋಟ ನಿರ್ಮಾಣವಾಗಿದೆ. ಹೆಚ್ಚಿನ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದ್ದು, ಕೆರೆಗಳ ಅಭಿವೃದ್ಧಿಗೆ ಮುಂದಾದ ಅಲ್ಲಿನ ಗ್ರಾಮ ಪಂಚಾಯತ್, ಗ್ರಾಮಸ್ಥರಿಗೆ ಸೂಕ್ತ ಮಾಹಿತಿ ನೀಡಿ ಯೋಜನೆಯ ಫಲ ಪಡೆಯುವಂತೆ ಪ್ರೇರೇಪಿಸುತ್ತಿದ್ದಾರೆ.
ವಾರ್ಡ್‌ನ ಎಲ್ಲ ಸದಸ್ಯರ ಸಹಕಾರ ದೊರಕಿದೆ. ನಾಗರಿಕರು ಗುಂಪುಗಳನ್ನು ರಚನೆ ಮಾಡಿಕೊಂಡು ಯೋಜನೆಯ ಪ್ರಯೋಜನ ಪಡೆಯುವ ಆಸಕ್ತಿ ವಹಿಸುತ್ತಿದ್ದಾರೆ. ಇನ್ನೆರಡು ಕೆರೆ ಗಳ ಅಭಿವೃದ್ಧಿಗೂ ಯೋಜನೆ ಹಾಕಿಕೊಂಡಿದ್ದಾರೆ. –ಸದಾಶಿವ ಮೂಲ್ಯ, ಪಿಡಿಒ ಕಾಂತಾವರ
ಉದ್ಯೋಗ ಖಾತರಿ ಯೋಜನೆಯನ್ನು ಬಳಸಿ ತಂಡ ರಚಿಸಿಕೊಂಡು ಕೆರೆ, ಕಾಲುವೆ ಅಭಿವೃದ್ಧಿಗೊಳಿಸಿದ್ದೇವೆ. ಯೋಜನೆಯಿಂದ ಸಮುದಾಯದ ಅಭಿವೃದ್ಧಿ, ನಮಗೂ ಪ್ರಯೋಜನವಾಗಿದೆ. –ಸುಧಾಕರ, ಕೆರೆ ಅಭಿವೃದ್ಧಿ ತಂಡದ ಸದಸ್ಯ
-ಬಾಲಕೃಷ್ಣ ಭೀಮಗುಳಿ