ಕೊಪ್ಪಳ: ಕೆ.ಎಸ್.ಈಶ್ವರಪ್ಪ ಅವರು ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಟೀಕೆ ಮಾಡುವುದು ಸಲ್ಲದು ಎಂದು ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಂದ ಕುಟುಂಬ ರಾಜಕಾರಣ ಎಂದು ಆರೋಪ ಮಾಡಿದ್ದಾರೆ. ಈಶ್ವರಪ್ಪ ಅವರ ಈ ಹೇಳಿಕೆಯನ್ನು ನಾನು ಖಂಡಿಸುವೆ. ಯಡಿಯೂರಪ್ಪ ಅವರು ಇಳಿ ವಯಸ್ಸಿನಲ್ಲೂ ಪ್ರಚಾರ ನಡೆಸಿದ್ದಾರೆ. ಆದರೆ ಅಪ್ಪ ಮಕ್ಕಳ ಹಾಗೂ ಕುಟುಂಬ ರಾಜಕಾರಣ ಎಂಬ ಆರೋಪ ಸರಿಯಲ್ಲ ಎಂದರು.
ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ಪಕ್ಷ ಕಟ್ಟಿ ಬೆಳೆಸಿದವರು. ಈಶ್ವರಪ್ಪ ಅವರು ಕಳೆದ ಬಾರಿ ಸಚಿವರಾಗಿದ್ದರು. ಆಗಲೂ ಕುರುಬ ಸಮಾಜಕ್ಕೆ ಲೋಕಸಭಾ ಟಿಕೆಟ್ ಕೊಟ್ಟಿಲ್ಲ. ಆಗ ಈಶ್ವರಪ್ಪ ಅವರು ಈ ಬಗ್ಗೆ ಮಾತನಾಡಲಿಲ್ಲ. ಈ ಹಿಂದೆ ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್ ಮಾಡಿ ಟೀಕೆ ಮಾಡಿದ್ದರು. ಈಶ್ವರಪ್ಪ ಅವರಿಗೆ ಈ ಹಿಂದೆ ಸಚಿವ ಹಾಗೂ ಡಿಸಿಎಂ ಸ್ಥಾನ ಕೊಟ್ಟಿದೆ ಎಂದರು.
ಕುರುಬ ಸಮಾಜದ ಬಗ್ಗೆ ಈವರೆಗೂ ಈಶ್ವರಪ್ಪ ಅವರು ಮಾತನಾಡಿಲ್ಲ. ಮುಂದಿನ ದಿನದಲ್ಲಿ ಈಶ್ವರಪ್ಪ ಹೇಳಿಕೆ ಪರಿಣಾಮವಾಗಲ್ಲ. ತಮ್ಮ ಮಗನಿಗೆ ಟಿಕೆಟ್ ಸಿಗಲಿಲ್ಲ ಎಂದು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ಅವರ ಜೊತೆ ನಾವು ಇದ್ದೇವೆ. ಅವರಿಗೆ ಚುನಾವಣೆಯಿಂದ ಹಿಂದೆ ಸರಿಯಿರಿ ಎಂದು ಸಂಘ, ಸಂಘಟನೆ ಹೇಳಿದೆ. ಈಗಲೂ ಎಂಪಿ ಟಿಕೆಟ್ ವಿಚಾರ, ಹೈಕಮಾಂಡ್ ತೀರ್ಮಾನ ಮಾಡಿದೆ. ಟಿಕೆಟ್ ಕೇಳಲಿ ಆದರೆ ಬೈಯುವುದು ಸರಿಯಲ್ಲ ಎಂದರು.
ಇದೇ ರೀತಿ ಮಾಡಿದರೆ ಮುಂದೆ ಪಕ್ಷ ಅವರ ಮೇಲೆ ಕ್ರಮ ಕೈಗೊಳ್ಳಲಿದೆ. ಪಕ್ಷ ಹೇಳಿದಂತೆ ಈಶ್ವರಪ್ಪ ಅವರು ನಡೆದರೆ ಕಾಂತೇಶಗೆ ಒಳ್ಳೆಯ ಭವಿಷ್ಯವಿದೆ. ಮುಂದೆಯೂ ಪಕ್ಷದಲ್ಲಿ ಸಮಾಜಕ್ಕೆ ಸ್ಥಾನಮಾನ ದೊರೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಹೇಮಲತಾ ನಾಯಕ್ಮ, ಬಿಜೆಪಿ ಮುಖಂಡ ಹೇಶ ಹಾದಿಮನಿ, ಡಿ ಮಲ್ಲಣ್ಣ ಉಪಸ್ಥಿತರಿದ್ದರು.