ರಿಷಭ್ ಶೆಟ್ಟಿ ನಿರ್ದೇಶನದ “ಕಾಂತಾರ’ ಚಿತ್ರ ಸೆ.30ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರ ಸೆನ್ಸಾರ್ ಪಾಸಾಗಿದ್ದು, “ಯು/ಎ’ ಪ್ರಮಾಣ ಪತ್ರ ಪಡೆದಿದೆ. ರಿಷಭ್ ಕೆರಿಯರ್‌ನ ಬಿಗ್ ಬಜೆಟ್ ಸಿನಿಮಾ. ಜೊತೆಗೆ ತನ್ನ ಹುಟ್ಟೂರಲ್ಲೇ ಇಡೀ ಸಿನಿಮಾವನ್ನು ರಿಷಭ್ ಕಟ್ಟಿಕೊಟ್ಟಿದ್ದಾರೆ.
ಕೆರಾಡಿಯಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಸೆಟ್ ಹಾಕಿ ಈ ಸಿನಿಮಾ ಚಿತ್ರೀಕರಿಸಲಾಗಿದೆ. ಕರಾವಳಿಯ ಆಚರಣೆಗಳಾದ ದೈವರಾಧನೆ, ಕಂಬಳ ಸೇರಿದಂತೆ ಹಲವು ಅಂಶಗಳನ್ನು ಚಿತ್ರದಲ್ಲಿ ಸೇರಿಸಿದ್ದಾರೆ. ಜೊತೆಗೆ ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷ ಕೂಡಾ ಈ ಚಿತ್ರದಲ್ಲಿ ಪ್ರಮುಖವಾಗಿದೆ.
ಇನ್ನು, “ಕಾಂತಾರ’ದಲ್ಲಿ ಕಂಬಳವೂ ಪ್ರಮುಖ ಆಕರ್ಷಣೆ. ಅದಕ್ಕಾಗಿ ಚಿತ್ರತಂಡ ಕಂಬಳ ಓಟವನ್ನು ಆಯೋಜಿಸಿ, ಆ ಮೂಲಕ ಚಿತ್ರೀಕರಿಸಿದೆ. ಜೊತೆಗೆ ಕಂಬಳ ಓಟದಲ್ಲಿ ಸ್ವತಃ ರಿಷಭ್ ಕಾಣಿಸಿಕೊಂಡಿದ್ದು, ಅದಕ್ಕಾಗಿ ವಾರಗಟ್ಟಲೇ ತರಬೇತಿ ಕೂಡಾ ಪಡೆದಿದ್ದಾರೆ. “ಕಂಬಳ ಓಡಿದ್ದು ಒಂದು ವಿಭಿನ್ನ ಅನುಭವ. ಸಿನಿಮಾಗೆ ಅವಶ್ಯಕತೆ ಇರುವಷ್ಟನ್ನು ಮಾತ್ರ ಮಾಡಿದೆ. ಇದರ ಜತೆಗೆ ಕರಾವಳಿ ಭಾಗದ ಹಳ್ಳಿ ಯುವಕ ಮತ್ತು ಕೋಣ ಓಡಿಸುವವನು ಹೇಗಿರುತ್ತಾನೋ ಎಂಬ ಲುಕ್ ಕೂಡಾ ಇಲ್ಲಿದೆ’ ಎನ್ನುವುದು ರಿಷಭ್ ಮಾತು.
ಈ ಚಿತ್ರದಲ್ಲಿ ರಿಷಭ್, 90ರ ದಶಕದಲ್ಲಿ ಅವರು ಕಂಡಂತಹ ಹಲವು ಘಟನೆಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ಕಥೆ ಮಾಡಿದ್ದಾರಂತೆ. ಕರಾವಳಿ ರೈತನ ಜೀವನದ ಭಾಗವಾಗಿರುವ ದೈವದ ಪ್ರಸ್ತಾಪವು ಸಿನಿಮಾದಲ್ಲಿದೆ. ಚಿತ್ರದಲ್ಲಿ ಕಿಶೋರ್, ರಘು ಪಾಂಡೇಶ್ವರ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಪ್ತಮಿ ಗೌಡ ಈ ಚಿತ್ರದಲ್ಲಿ ನಾಯಕಿ.
ಅಂದಹಾಗೆ, ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ. “ಕಾಂತಾರ’ ಒಂದು ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಹೆಚ್ಚು ಆ್ಯಕ್ಷನ್‌ಗಳಿವೆ. ಆದರೆ, ಈ ಎಲ್ಲಾ ಆ್ಯಕ್ಷನ್‌ಗಳಲ್ಲಿ ರಿಷಭ್ ಡ್ನೂಪ್ ಇಲ್ಲದೇ ಫೈಟ್ ಮಾಡಿದ್ದಾರಂತೆ. ಇನ್ನು, ಕಾಂತಾರ ಚಿತ್ರ ಮಂಗಳೂರು, ಕುಂದಾಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುವ ಕಥೆ ಹೊಂದಿದೆ. ಅಲ್ಲಿನ ವಾತಾವಾರಣ ಕಥೆಗೆ ಅಗತ್ಯವಾದ ಕಾರಣ ಅಲ್ಲಿ ಚಿತ್ರೀಕರಿಸಿದೆ ಚಿತ್ರತಂಡ.