ಬೆಂಗಳೂರು : ಗೆಲುವಿನ ಯಶಸ್ಸಿನ ಶಿಖರವೇರಿ ನಾಗಾಲೋಟ ಮುಂದುವರಿಸಿರುವ ‘ಕಾಂತಾರ’ ಚಿತ್ರ ರೇಟಿಂಗ್ ನಲ್ಲಿ ಕನ್ನಡ ಚಿತ್ರ ರಂಗದ ಸಾರ್ವಕಾಲಿಕ ದಾಖಲೆಗಳನ್ನು ಮುರಿದಿದೆ. IMDb ರೇಟಿಂಗ್ ನಲ್ಲಿ ಕೆಜಿಎಫ್ ಚಿತ್ರವನ್ನು ಮೀರಿಸಿದ್ದು,10 ರಲ್ಲಿ 9.5 ರೇಟಿಂಗ್ ಪಡೆದುಕೊಂಡಿದೆ.
ಈ ಹಿಂದೆ ಕೆಜಿಎಫ್1-8.2, ಕೆಜಿಎಫ್ 2- 8.4 ರೇಟಿಂಗ್ ಪಡೆದುಕೊಂಡಿತ್ತು. ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777- 9.0 ರೇಟಿಂಗ್ ಪಡೆದು ಕೊಂಡಿತ್ತು.
ಕರಾವಳಿಯ ಕಂಬಳ ಮತ್ತು ಭೂತ ಕೋಲದ ಸಂಸ್ಕೃತಿಯನ್ನು ಒಳಗೊಂಡಿರುವ, ದೈವದ ಮಹಿಮೆಯನ್ನು ಸಾರುವ, ಪ್ರಕೃತಿಯ ದಟ್ಟ ಕಾಡಿನ ನಡುವಿನಲ್ಲಿರುವ ಹಳ್ಳಿಗರು ಮತ್ತು ದುಷ್ಟ ಶಕ್ತಿಗಳ ನಡುವಿನ ಹೋರಾಟ, ಅಲ್ಲಿ ಗಮನ ಸೆಳೆಯುವ ಕಥಾ ನಾಯಕ ‘ಶಿವ’ ನಾಗಿ ರಿಷಬ್ ಶೆಟ್ಟಿ ಸಾಟಿಯಿಲ್ಲದ ನಟನೆಯಿಂದ ವಿಶ್ವಾದ್ಯಂತ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸೆಪ್ಟೆಂಬರ್ 30 ರಂದು ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ‘ಕಾಂತಾರ’ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದು, ವಾರದೊಳಗೆ ಇತರ ಭಾಷೆಗಳಿಂದ ಭಾರಿ ಬೇಡಿಕೆ ಕಂಡು ಕೊಂಡು ಹಿಂದಿ ಯಲ್ಲಿ ಬಿಡುಗಡೆಯಾಗಿದ್ದು, ತಮಿಳು, ತೆಲುಗು ಮತ್ತು ಮಲಯಾಳಂ ನಲ್ಲೂ ತೆರೆಗೆ ಬರುತ್ತಿದೆ.
ಈಗಾಗಲೇ ದಿಗ್ಗಜ ನಟರು ಘಟಾನುಘಟಿ ರಾಜಕಾರಣಿಗಳು ಚಿತ್ರ ಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿದ್ದಾರೆ. ಅನೇಕ ಪರಭಾಷಾ ದಿಗ್ಗಜ ನಟರೂ ರಿಷಬ್ ಗೆ ಹೊಗಳಿಗೆಯ ಹೂಮಳೆಯನ್ನೇ ಸುರಿಸಿದ್ದಾರೆ. ಕರಾವಳಿಯಲ್ಲಿ ಚಿತ್ರದಲ್ಲಿ ಕಥಾ ವಸ್ತುವಾಗಿರುವ ದೈವದ ಮಹಿಮೆಯೆನ್ನುವುದು ಎಂದೂ ಚಿತ್ರ ಮಂದಿರದತ್ತ ಕಣ್ಣು ಹಾಯಿಸದವರನ್ನೂ ಚಿತ್ರಮಂದಿರದೊಳಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಹಲವು ಮಂದಿ ಚಿತ್ರ ವೀಕ್ಷಿಸಿ 10 ರಲ್ಲಿ 10 ಅಂಕ ನೀಡಿದ್ದು “ವಿವರಿಸಲು ಪದಗಳಿಲ್ಲ…. ಅತ್ಯುತ್ತಮ ಸಿನಿಮಾ. ಎಲ್ಲರ ಶ್ರಮ ತೆರೆಯ ಮೇಲೆ ಕಾಣಿಸುತ್ತದೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮುಂದಿನ ಹಂತವಾಗಿದೆ. ಬಿಜಿಎಂ ಮತ್ತು ಅಜನೀಶ್ ಅವರ ಹಾಡುಗಳು ಗೂಸ್‌ಬಂಪ್ಸ್ . ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಬೆಂಕಿ. ಸಪ್ತಮಿ ಗೌಡ ಅತ್ಯುತ್ತಮ ಮತ್ತು ರೋಮ್ಯಾಂಟಿಕ್ ಆಗಿದ್ದಾರೆ. ಹೊಸತನದ ಕಥೆಯೊಂದಿಗೆ ಶಿವ ಮತ್ತು ಗ್ಯಾಂಗ್ ಕಥೆಯನ್ನು ಚಲಿಸುವಂತೆ ಮಾಡುತ್ತದೆ. ಕೊನೆಯ ಕ್ಲೈಮ್ಯಾಕ್ಸ್ ಥಿಯೇಟರ್ ಅನುಭವದಲ್ಲೇ ನೋಡಲೇಬೇಕಾಗಿರುವುದು ದೈವಿಕ ಕ್ಷಣವಾಗಿದೆ. ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರ ಮತ್ತು ಸಾಂಸ್ಕೃತಿಕವಾಗಿ ಆಳವಾಗಿ ಬೇರೂರಲಿದೆ ಎಂದು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.