ಬೆಂಗಳೂರು : ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿದ್ದ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಮನೋಜ್ಞ ನಟನೆಯ ‘ಕಾಂತಾರ’ ಚಿತ್ರದ ನಾಗಾಲೋಟ ವಿಶ್ವದೆಲ್ಲೆಡೆ ಮುಂದುವರಿದಿದ್ದು, ಒಂದಾದ ಮೇಲೊಂದು ಹೊಸ ದಾಖಲೆಗಳನ್ನು ಬರೆಯುತ್ತಾ ಇನ್ನಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ ಮತ್ತು ವೀಕ್ಷಿಸಿದ ಪ್ರೇಕ್ಷರನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತಿದೆ.
ಕನ್ನಡದ ದೈತ್ಯ ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಂಸ್ಥೆಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ 2’ ಬಳಿಕ ಇನ್ನೊಂದು ಭಾರಿ ಯಶಸ್ಸು ನೀಡಿರುವ ಚಿತ್ರ ಇದಾಗಿದೆ.
”ಈವರೆಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..! ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ..ಧನ್ಯವಾದ ಕರ್ನಾಟಕ” ಎಂದು ವಿಜಯ್ ಕಿರಗಂದೂರು ಅವರ ಒಡೆತನದ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದೆ.
ಮೆಲ್ಬರ್ನ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ಥಾನ ನಡುವಿನ ಜಿದ್ದಾಜಿದ್ದಿನ ಕ್ರಿಕೆಟ್ ಪಂದ್ಯಾಟದ ವೀಕ್ಷಕರ ಗ್ಯಾಲರಿಯಲ್ಲಿ, ಕನ್ನಡದ ದಂತಕಥೆ ‘ಕಾಂತಾರ’ ಚಿತ್ರದ ಪೋಸ್ಟರ್ ಹಿಡಿದು ಕುಂದಾಪುರದ ಅಚ್ಯುತ್ ಎಂಬ ಅಭಿಮಾನಿ ಸಂಭ್ರಮಿಸಿರುವ ವಿಡಿಯೋ ಈಗ ವೈರಲ್ ಆಗಿದೆ. ವಿಶೇಷವೆಂದರೆ ಪಂದ್ಯದ ರೋಮಾಂಚನಕಾರಿ ಗೆಲುವಿನ ಬಳಿಕ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಿರಾಟ್ ಕೊಹ್ಲಿ ‘ಕಾಂತಾರ’ ಚಿತ್ರ ನೋಡಿದ್ದರು ಎಂಬ ಪೋಸ್ಟರ್ ಗಳನ್ನೂ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು.
ಇದುವರೆಗೆ ಹೊಂಬಾಳೆ , ನಿನ್ನಿಂದಲೆ , ಮಾಸ್ಟರ್ ಪೀಸ್, ರಾಜಕುಮಾರ, ಕೆಜಿಎಫ್ 1, ಯುವರತ್ನ, ಕೆಜಿಎಫ್ 2 ಚಿತ್ರಗಳು ಬಿಡುಗಡೆಯಾಗಿದ್ದು, ಇನ್ನೂ ಹಲವು ಚಿತ್ರಗಳನ್ನು ನಿರ್ಮಿಸುತ್ತಿದೆ. ಆ ಪೈಕಿ ರಕ್ಷಿತ್ ಶೆಟ್ಟಿ ಅವರ ‘ರಿಚರ್ಡ್ ಆಂಟನಿ’ ಘೋಷಣೆಯಾಗಿದ್ದು, ‘ರಾಘವೇಂದ್ರ ಸ್ಟೋರ್ಸ್’ ಚಿತ್ರೀಕರಣ ಮುಕ್ತಾಯಗೊಂಡಿದೆ. ಪ್ರಭಾಸ್ ನಟಿಸುತ್ತಿರುವ ‘ಸಲಾರ್’ ಮೊದಲಾದ ಬಿಗ್ ಬಜೆಟ್ ಚಿತ್ರಗಳಿವೆ.