ಬೆಂಗಳೂರು: ತನ್ನ ನಟನೆಯಿಂದ ಅಪಾರ ಪ್ರೇಕ್ಷಕರ ಪ್ರೀತಿಯನ್ನುಗಳಿಸಿರುವ ನಟ ಕಿಶೋರ್ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ.
ಎಲಾನ್ ಮಸ್ಕ್ ಟ್ವಿಟರ್ ಸಿಇಓ ಆದ ಬಳಿಕ ಟ್ವಿಟರ್ ನಲ್ಲಿ ಹತ್ತಾರು ಬದಲಾವಣೆಗಳನ್ನು ತಂದಿದ್ದಾರೆ. ಮೊದಲಿದ್ದ ಟ್ವಿಟರ್ ನೀತಿ – ನಿಯಮಗಳು ಈಗ ಮತ್ತಷ್ಟು ಕಠಿಣವಾಗಿದೆ. ಯಾವುದೇ ರೀತಿಯ ಮನೋಭಾವಕ್ಕೆ ಧಕ್ಕೆ ತರುವಂತಹ ಟ್ವೀಟ್ ಗಳಿದ್ದರೆ, ನಿಯಮವನ್ನು ಉಲ್ಲಂಘಿಸುವ ಟ್ವೀಟ್ ಗಳಿದ್ದರೆ ಅಂತಹ ಟ್ವಿಟರ್ ಖಾತೆಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸಲಾಗುತ್ತದೆ.
ನಟ ಕಿಶೋರ್ ಅವರ ಖಾತೆಯನ್ನು ಟ್ವಟಿರ್ ಅಮಾನತು ಮಾಡಲಾಗಿದ್ದು, ಸಂಸ್ಥೆಯ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ ಹೇಳಿದೆ.
ಆದರೆ ಯಾವ ಕಾರಣಕ್ಕೆ, ಯಾವ ಟ್ವೀಟ್ ಗಾಗಿ ಖಾತೆ ಅಮಾನತು ಮಾಡಲಾಗಿದೆ ಎನ್ನುವುದನ್ನು ಹೇಳಿ ಎಂದು ಅಭಿಮಾನಿಗಳು ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಆಗ್ರಹಿಸುತ್ತಿದ್ದಾರೆ.
ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ ? ಎನ್ನುವ ಸಾಲುಗಳನ್ನು ಇತ್ತೀಚೆಗೆ ನಟ ಕಿಶೋರ್ ಅವರು ಬರೆದುಕೊಂಡಿದ್ದರು. ಬಹುಶಃ ಇದೇ ಕಾರಣಕ್ಕೆ ಈ ರೀತಿ ಆಗಿರಬಹುದು ಎಂದು ಕೆಲ ಫ್ಯಾನ್ಸ್ ಗಳು ಹೇಳುತ್ತಿದ್ದಾರೆ.
ಇತ್ತೀಚೆಗೆ ನಟ ಕಿಶೋರ್ ಅವರು ʼಕಾಂತಾರʼ ಹಾಗೂ ಪೊನ್ನಿಯಿನ್ ಸೆಲ್ವನ್ : 1 ಚಿತ್ರದಲ್ಲಿನ ಅಭಿನಯಕ್ಕೆ ಪ್ರೇಕ್ಷಕರಿಂದ ಶ್ಲಾಘನೆ ವ್ಯಕ್ತವಾಗಿತ್ತು.