Advertisement

ಹೈದರಾಬಾದ್‌ ಟೆಕ್ಕಿಯ ಉಳಿಸಲು ಯತ್ನಿಸಿದ ಅಮೆರಿಕನ್‌ ತರುಣ ಈಗ ಹೀರೋ

05:36 PM Feb 24, 2017 | udayavani editorial |

ಕಾನ್ಸಾಸ್‌, ಅಮೆರಿಕ : ಕಾನ್ಸಾಸ್‌ನ ಒಲಾತೆ ಬಾರ್‌ನಲ್ಲಿ ಗುಂಡು ಹಾರಿಸಿ ಭಾರತೀಯ ಟೆಕ್ಕಿ ಶ್ರೀನಿವಾಸ್‌ ಕುಚಿಬೋಟ್ಲ ಅವರನ್ನು ಹತ್ಯೆಗೈಯದಂತೆ ದಾಳಿಕೋರ 51ರ ಹರೆಯದ ಆ್ಯಡಂ ಪ್ಯುರಿಂಟಾನ್‌ ನನ್ನು ತಡೆಯಲು ಯತ್ನಿಸಿ ಕೈಗೆ, ಎದೆಗೆ  ಗುಂಡೇಟು ಪಡೆದು ಆಸ್ಪತ್ರೆ ಸೇರಿರುವ 24ರ ಹರೆಯದ ಅಮೆರಿಕನ್‌ ತರುಣ ಇಯಾನ್‌ ಗ್ರಿಲೋಟ್‌ ಈಗ ಹೀರೋ ಆಗಿದ್ದಾರೆ. ಗ್ರಿಲೋಟ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.  

Advertisement

ಅಮೆರಿಕನ್‌ ನೌಕಾಪಡೆಯ ನಿವೃತ್ತ ಸಿಬಂದಿಯಾಗಿರುವ ಪ್ಯುರಿಂಟಾನ್‌, ಒಲಾತೆ ಬಾರ್‌ನಲ್ಲಿ ಕುಳಿತಿದ್ದ ಹೈದರಾಬಾದಿನ ಇಂಜಿನಿಯರ್‌ಗಳಾದ ಶ್ರೀನಿವಾಸ್‌ ಕುಚಿಬೋಟ್ಲ ಮತ್ತು ಆಲೋಕ್‌ ಮದಸಾನಿ ಅವರ ಮೇಲೆ ಜನಾಂಗೀಯ ದ್ವೇಷದಿಂದ “ನನ್ನ ದೇಶ ಬಿಟ್ಟು ತೊಲಗಿ’ ಎಂದು ಕೂಗುತ್ತಾ ಗುಂಡು ಹಾರಿಸಿದಾಗ ಗ್ರಿಲೋಟ್‌ ಅಲ್ಲೇ ಸಮೀಪ ಕುಳಿತಿದ್ದರು. 

“ಗುಂಡು ಹಾರಾಟ ನಡೆಯಲಾರಂಭಿಸಿದಾಗ ಒಡನೆಯೇ ನಾನು ಟೇಬಲ್‌ ಕೆಳಗೆ ತಲೆತಗ್ಗಿಸಿಕೊಂಡು ಅಡಗಿ ಕುಳಿತೆ. ಆತನ ಬಂದೂಕಿನಲ್ಲಿ ಮದ್ದುಗುಂಡುಗಳು ಮುಗಿದವೆಂದು ಭಾವಿಸಿ ಮೇಲೆದ್ದೆ. ಶ್ರೀನಿವಾಸ್‌ ಅವರನ್ನು  ಉಳಿಸುವ ಯತ್ನದಲ್ಲಿ  ಶೂಟರ್‌ ನ ಕೈಯಿಂದ ಗನ್‌ ಕಿತ್ತುಕೊಳ್ಳಲು ಯತ್ನಿಸಿದೆ. ಆತ ಮತ್ತೂ ಗುಂಡು ಹಾರಿಸತೊಡಗಿದ್ದ. ನನ್ನ ಎದೆ, ಕೈ ಮತ್ತು ಕುತ್ತಿಗೆಗೆ ಗುಂಡೇಟು ಬಿದ್ದಿತ್ತು. ಶ್ರೀನಿವಾಸ್‌  ಗುಂಡೇಟಿಗೆ ಬಲಿಯಾದರು. ಆದರೆ 
ಅವರ ಜತೆಗಾರ ಮದಸಾನಿ ಬಚಾವಾದರು. ಹಾಗಿದ್ದರೂ ಗುಂಡೇಟು ಪಡೆದ ನಾನು ಅದೃಷ್ಟವಶಾತ್‌ ಬದುಕುಳಿದೆ’ ಎಂದು ಗ್ರಿಲೋಟ್‌ ಹೇಳಿದ್ದಾರೆ. 

ಶೂಟರ್‌ನನ್ನು ತಡೆಯಲು ಯಾರಾದರೂ ಮಾಡಬಹುದಾದ್ದನ್ನೇ ನಾನು ಮಾಡಿದ್ದೆ. ನಾವೆಲ್ಲರೂ ಮನುಷ್ಯರೇ. ನಮ್ಮ ನಡುವಿರುವ ವ್ಯಕ್ತಿ ಕೂಡ ನಮ್ಮ ಹಾಗೆ ಮನುಷ್ಯನೇ. ಆತ ಯಾವುದೇ ದೇಶಕ್ಕೆ ಸೇರಿರಲಿ; ಯಾವುದೇ ಜನಾಂಗದವನಾಗಿರಲಿ; ನಾವೆಲ್ಲರೂ ಮನುಷ್ಯರೇ’ ಎಂದು ಗ್ರಿಲೋಟ್‌ ಹೇಳಿದರು. 

ಶೂಟರ್‌ನ ಗುಂಡೇಟಿನಿಂದ ಪಾರಾಗಿರುವ ಆಲೋಕ್‌ ಮದಸಾನಿಅವರು ಗುರುವಾರ ಆಸ್ಪತ್ರೆಗೆ ಬಂದು ನನ್ನನ್ನು ಭೇಟಿಯಾದರು. ಆತನ ಪತ್ನಿ ಐದು ತಿಂಗಳ ಗರ್ಭಿಣಿ. ಗೆಳೆಯ ಶ್ರೀನಿವಾಸ್‌ ಅವರನ್ನು ಕಳೆದುಕೊಂಡದ್ದು ನಿಜಕ್ಕೂ ದುರದೃಷ್ಟಕರ. ಆದರೂ ಆಲೋಕ್‌ ಪಾರಾದರಲ್ಲ; ಅದೇ ನನ್ನ ಮಟ್ಟಿಗೆ ಕಳೆದ 24 ತಾಸುಗಳಲ್ಲಿ  ನನ್ನ ಮುಖದ ಮೇಲಿನ ಮಂದಹಾಸಕ್ಕೆ ಕಾರಣವಾಗಿದೆ’ ಎಂದು ಗ್ರಿಲೋಟ್‌ ಹೇಳಿದರು. 

Advertisement

ಒಲಾತೆ ಬಾರ್‌ನಲ್ಲಿ ಗುಂಡು ಹಾರಿಸಿ ಅಮಾಯಕ ಜೀವವನ್ನು  ಬಲಿ ಪಡೆದ ಬಳಿಕ ಅಲ್ಲಿಂದ ಪರಾರಿಯಾಗಿ ಒಲಾತೆಯಿಂದ 80 ಕಿ.ಮೀ. ದೂರದ ಬಾರ್‌ ಒಂದರಲ್ಲಿ ಅಡಗಿಕೊಂಡಿದ್ದ  ಪ್ಯುರಿಂಟಾನ್‌ ನನ್ನು ಪೊಲೀಸರು ಐದು ತಾಸುಗಳ ಬಂಧಿಸಿದ್ದಾರೆ. “ಇದೊಂದು ಅತ್ಯಂತ ದುರದೃಷ್ಟಕರ ಮತ್ತು ಬುದ್ಧಿಗೇಡಿ ಹಿಂಸಾಕೃತ್ಯವಾಗಿದೆ’ ಎಂದು ಒಲಾತೆ ಪೊಲೀಸ್‌ ಮುಖ್ಯಸ್ಥ ಸ್ಟೀವನ್‌ ಮೆಂಕೆ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next