ಲಕ್ನೋ: ಸುಮಾರು 36ಗಂಟೆಗಳಿಂದ ಐದು ಎಣಿಕೆ ಯಂತ್ರದ ಮೂಲಕ ಐಟಿ ಅಧಿಕಾರಿಗಳು ನೋಟುಗಳನ್ನು ಎಣಿಸುತ್ತಿದ್ದರೂ ಇನ್ನೂ ಎಣಿಕೆ ಮುಗಿದಿಲ್ಲ! ಉತ್ತರಪ್ರದೇಶದ ಕಾನ್ಪುರದ ಸುಗಂಧದ್ರವ್ಯ ವ್ಯಾಪಾರಿ ಮನೆಯಲ್ಲಿ ಸಿಕ್ಕಿರುವ ಕಂತೆ ಕಂತೆ ನೋಟು ಗಳನ್ನು ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ. ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ಗುಪ್ತಚರ ಪ್ರಧಾನ ನಿರ್ದೇಶನಾಲಯದ ಜಂಟಿ ತಂಡವು ಗುರುವಾರ ಆರಂಭಿಸಿದ ನೋಟುಗಳ ಲೆಕ್ಕಾಚಾರ ಶನಿವಾರದವರೆಗೂ ಮುಂದುವರಿದಿದ್ದು, ಒಟ್ಟಾರೆ 24 ಗಂಟೆಗಳ ಕಾರ್ಯಾಚರಣೆಯಲ್ಲಿ ಭಾರೀ ಮೊತ್ತದ ನಗದು ಪತ್ತೆಯಾಗಿದೆ.
ಇದನ್ನೂ ಓದಿ:ರಾತ್ರಿ ಕರ್ಫ್ಯೂ ಜಾರಿ ಕುರಿತಂತೆ ರವಿವಾರ ಸಭೆಯಲ್ಲಿ ಚರ್ಚೆ: ಸಿಎಂ ಬೊಮ್ಮಾಯಿ
ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ(ಸಿಬಿಐಸಿ) ಇತಿಹಾಸ ದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತ ಪತ್ತೆಯಾಗಿದೆ ಎಂದು ಮುಖ್ಯಸ್ಥ ವಿವೇಕ್ ಜೋಹ್ರಿ ಹೇಳಿದ್ದಾರೆ.
ಐಟಿ ಅಧಿಕಾರಿಗಳು ಶನಿವಾರ 12.50ರ ವೇಳೆಗೆ ನೀಡಿರುವ ಮಾಹಿತಿ ಪ್ರಕಾರ, ಪಿಯೂಷ್ ಜೈನ್ ಮನೆಯಲ್ಲಿ ಒಟ್ಟು 177.45 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ನೋಟು ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಶೋಧ ಕಾರ್ಯ ಮುಂದುವರಿದಿರುವುದಾಗಿ ತಿಳಿಸಿದೆ.
ಸುಸ್ತಾಗಿ ಎಣಿಕೆ ಯಂತ್ರ ತಂದರು: ಸುಗಂಧ ದ್ರವ್ಯಗಳ ವ್ಯಾಪಾರಿ ಪಿಯೂಷ್ ಜೈನ್ ಮನೆಯೊಳಗೆ 2 ದೊಡ್ಡ ಕಪಾಟುಗಳಲ್ಲಿ ಪೇಪರ್ ಕವರ್‌ನಲ್ಲಿ ಸುತ್ತಿಟ್ಟ ನೋಟುಗಳ ಕಂತೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿತ್ತು. ಅಧಿಕಾರಿಗಳು ಆ ಕಂತೆಗಳನ್ನು ಕೆಳಕ್ಕೆ ಸುರಿದು ನೆಲದಲ್ಲಿ ಕುಳಿತು ಕೈಯ್ಯಲ್ಲೇ ನೋಟು ಎಣಿಸ ತೊಡಗಿದರು.
ಹಲವು ಗಂಟೆಗಳ ಕಳೆದರೂ ನೋಟು ಎಣಿಸಿ ಮುಗಿಯುವಂತೆ ಕಾಣಲಿಲ್ಲ. ಸುಸ್ತಾದ ಅಧಿಕಾರಿಗಳು ಕೊನೆಗೆ, 5 ಎಣಿಕೆ ಯಂತ್ರ ತರಿಸಿ ಎಣಿಸತೊಡಗಿದರು. ಸದ್ಯಕ್ಕೆ 150 ಕೋಟಿ ರೂ.ಗಳಿವೆಯೆಂದು ಅಂದಾಜಿಸಲಾಗಿದೆ. ಈ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
ಅಖೀಲೇಶ್ ಆಪ್ತ?: ಜೈನ್ ಅವರು ಉತ್ತರ ಪ್ರದೇಶದ ಎಸ್‌ಪಿ ನಾಯಕ ಅಖೀಲೇಶ್ ಯಾದವ್ ಅವರಿಗೆ ಆಪ್ತರೂ ಆಗಿದ್ದರು. ಇತ್ತೀಚೆಗಷ್ಟೇ “ಸಮಾಜವಾದಿ ಅತ್ತರ್’ ಎಂಬ ಹೆಸರಿನಲ್ಲಿ ಸಮಾಜವಾದಿ ಪಾರ್ಟಿ ಪರ್ಫ್ಯೂಮ್ ಅನ್ನೂ ಜೈನ್ ಪರಿಚಯಿಸಿದ್ದರು.