ಕಾನ್ಪುರ್(ಉತ್ತರಪ್ರದೇಶ): ಉತ್ತರಪ್ರದೇಶ ಸರ್ಕಾರ ರಾಜ್ಯದಲ್ಲೇ ಮೊಟ್ಟ ಮೊದಲ ಚಿಟ್ಟೆ ಪಾರ್ಕ್ ಅನ್ನು ಕಾನ್ಪುರದಲ್ಲಿ ಉದ್ಘಾಟಿಸಿದೆ. ಚಿಟ್ಟೆಗಳನ್ನು ಪರಿಸರ ಸ್ನೇಹಿಯಾಗಿ ರಕ್ಷಿಸುವ ನಿಟ್ಟಿನಲ್ಲಿ ಚಿಟ್ಟೆ ಪಾರ್ಕ್ ನಿರ್ಮಿಸಿರುವುದಾಗಿ ಉತ್ತರಪ್ರದೇಶ ಸರ್ಕಾರ ಹೇಳಿದೆ.
ಕಾನ್ಪುರ್ ಝೂ ಅಧಿಕಾರಿಗಳ ಮಾಹಿತಿ ಪ್ರಕಾರ, ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಚಿಟ್ಟೆ ಪಾರ್ಕ್ ಅನ್ನು ನಿರ್ಮಿಸಲಾಗಿದೆ.
ಚಿಟ್ಟೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಒಟ್ಟು 100 ವಿಧದ ಹೂವಿನ ಗಿಡಗಳನ್ನು ಈ ಪಾರ್ಕ್ ನಲ್ಲಿ ಬೆಳೆಸಲಾಗಿದೆ. ಈಗ ಪಾರ್ಕ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ವಿಧದ ಚಿಟ್ಟೆಗಳನ್ನು ಕಾಣಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಾ.ಆರ್ ಕೆ ಸಿಂಗ್ ಹೇಳುವಂತೆ, ಈಗಾಗಲೇ ಪಾರ್ಕ್ ನಲ್ಲಿ 50ಕ್ಕೂ ಹೆಚ್ಚು ವಿಧದ ಚಿಟ್ಟೆಗಳಿವೆ. ಆದರೆ ಅಧಿಕಾರಿಗಳು ಈ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಕಲೆ ಹಾಕಬೇಕಾಗಿದೆ ಎಂದರು. ಚಿಟ್ಟೆ ಪಾರ್ಕ್ 2018ರ ಮಾರ್ಚ್ ತಿಂಗಳಿನಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಇದಕ್ಕೆ ಪೂರಕ ಎಂಬಂತೆ ವರ್ಷಪೂರ್ತಿ ಹಸಿರಿನಿಂದ ಕಂಗೊಳಿಸುವ ಮೂಲಕ ಪ್ರವಾಸಿಗರಿಗೂ ಖುಷಿಕೊಡುವ ನಿಟ್ಟಿನಲ್ಲಿ 40 ವಿಧದ ಹೂವಿನ ಗಿಡಗಳನ್ನು ಕೂಡ ನೆಡಲಾಗಿದೆ ಎಂದು ವರದಿ ತಿಳಿಸಿದೆ.