Advertisement

ಸಂತ್ರಸ್ತರಿಗೆ ಅನ್ನಪೂರ್ಣೆ ಈ ಕನೇರಿಮಠ

10:28 AM Aug 14, 2019 | Suhan S |

ಕನೇರಿ: ನೇಪಾಳ, ಕೇರಳದಲ್ಲಿ ಕಂಡು ಬಂದಿದ್ದ ಪ್ರಕೃತಿ ವಿಪತ್ತು ಸಂದರ್ಭ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಮಹಾರಾಷ್ಟ್ರ ಕೊಲ್ಲಾಪುರದ ಕನೇರಿಮಠ, ಕೊಲ್ಲಾಪುರ ಜಿಲ್ಲೆಯ ಪ್ರವಾಹ ಸಂತ್ರಸ್ತರು ಹಾಗೂ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಿಲುಕಿದ್ದ ಸಾವಿರಾರು ಪ್ರಯಾಣಿಕರಿಗೂ ನೆರವಾಗುವ ಮೂಲಕ ಸಾರ್ಥಕತೆ ಮೆರೆದಿದೆ.

Advertisement

ಶ್ರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಊಟ-ಉಪಹಾರ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಪ್ರವಾಹದಿಂದಾಗಿ ಕೊಲ್ಲಾಪುರ ನಗರ, ಆ ಜಿಲ್ಲೆಯ ನೂರಾರು ಗ್ರಾಮಗಳು ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಅನೇಕ ಗ್ರಾಮಗಳೂ ಜಲಾವೃತಗೊಂಡಿದ್ದವು. ಅಲ್ಲದೇ ರಸ್ತೆ ಕುಸಿತದಿಂದಾಗಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಲು ಸಾಲು ವಾಹನಗಳು ನಿಂತಿದ್ದು, ಊಟ, ನೀರು ಇಲ್ಲದೆ ಸುಮಾರು ಐದು ಸಾವಿರಕ್ಕೂ ಅಧಿಕ ಪ್ರಯಾಣಿಕರು ಪರದಾಡುವಂತಾಗಿತ್ತು.

ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದಿಂದ ಊಟದ ಪಾಕೆಟ್‌ಗಳನ್ನು ಸಿದ್ಧಪಡಿಸಿ, ಹೆದ್ದಾರಿಯಲ್ಲಿದ್ದ ಸಾವಿರಾರು ಪ್ರಯಾಣಿಕರಿಗೆ ಊಟ, ನೀರು ಹಾಗೂ ಅಗತ್ಯ ಇದ್ದವರಿಗೆ ಔಷಧಿ ಹಾಗೂ ವೈದ್ಯಕೀಯ ತಾತ್ಕಾಲಿಕ ನೆರವು ನೀಡಲಾಯಿತು. ಇನ್ನೊಂದೆಡೆ ಪ್ರವಾಹ ಸಂಕಷ್ಟಕ್ಕೆ ಸಿಲುಕಿದವರಿಗೆ ತಾತ್ಕಾಲಿಕ ಬದುಕು ನಿರ್ವಹಣೆಗೆ ಪೂರಕವಾಗಿ ಆಹಾರ ಸಾಮಗ್ರಿ, ಅಗತ್ಯ ವಸ್ತುಗಳು ಹಾಗೂ ಕೊಬ್ಬರಿ ಎಣ್ಣೆ, ಬಿಸ್ಕಿಟ್ ಸೇರಿದಂತೆ ಒಟ್ಟು 25 ಪದಾರ್ಥ-ವಸ್ತುಗಳ 25 ಕೆ.ಜಿ.ತೂಕದ ಕಿಟ್ ನೀಡಲಾಗುತ್ತದೆ. ಒಂದು ಕಿಟ್‌ಗೆ ಅಂದಾಜು 1,500ರೂ.ವೆಚ್ಚ ತಗುಲಲಿದೆ.

ಮೊದಲ ಹಂತವಾಗಿ ಸುಮಾರು 5,000 ಕುಟುಂಬಗಳಿಗೆ ಈ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು, ನಂತರದಲ್ಲಿ ಸುಮಾರು 25 ಸಾವಿರ ಕುಟುಂಬಗಳಿಗೆ ಈ ಕಿಟ್‌ಗಳ ವಿತರಣೆಗೆ ಶ್ರೀಮಠ ಯೋಜಿಸಿದೆ. ಇನ್ನಷ್ಟು ಗ್ರಾಮಗಳು ನೀರಿನಿಂದ ಆವೃತಗೊಂಡಿದ್ದು, ಅಲ್ಲಿನ ಸಂಪರ್ಕ ಸಾಧ್ಯವಾದ ನಂತರ ಕಿಟ್‌ಗಳ ಬೇಡಿಕೆ ಇನ್ನಷ್ಟು ಹೆಚ್ಚಬಹುದಾಗಿದ್ದು, ಅದನ್ನು ವಿತರಿಸಲು ಶ್ರೀಮಠ ಸಿದ್ಧವಾಗಿದೆ. ಶ್ರೀಮಠದ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ನೀರು ತಗ್ಗಿದ ವಿವಿಧ ಗ್ರಾಮ, ಪ್ರದೇಶಗಳಿಗೆ ತೆರಳಿದ್ದು, ಊಟ ಹಾಗೂ ವೈದ್ಯಕೀಯ ಸೇವೆ ನೀಡತೊಡಗಿದ್ದಾರೆ.

ಶ್ರೀಮಠದ ಪ್ರವಾಹ ಪರಿಹಾರ ಕಾರ್ಯಕ್ಕೆ ಮಹಾರಾಷ್ಟ್ರದ ಮೆನನ್‌ ಆ್ಯಂಡ್‌ ಮೆನನ್‌ ಕಂಪೆನಿ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಸುಮಾರು 25 ಲಕ್ಷ ರೂ. ದೇಣಿಗೆ ನೀಡಿದೆ. ಮುಂಬೈ, ಪುಣೆಯ ವಿವಿಧ ದೊಡ್ಡ ಕಂಪೆನಿಗಳವರೂ ದೇಣಿಗೆ ನೀಡಲು ಮುಂದಾಗಿದ್ದಾರೆ.

Advertisement

ಕೊಲ್ಲಾಪುರದ ಎನ್‌ಜಿಒಗಳ ಒಕ್ಕೂಟದವರು ದೇಣಿಗೆ ಹಾಗೂ ಸಂಗ್ರಹ ಪರಿಹಾರ ಸಾಮಗ್ರಿಗಳನ್ನು ಶ್ರೀಮಠಕ್ಕೆ ನೀಡಿ, ಶ್ರೀಮಠದ ಮಾರ್ಗದರ್ಶನದಲ್ಲೇ ವಿತರಣೆಗೆ ನಿರ್ಧರಿಸಿದ್ದಾರೆ. ಇನ್ನು ಸಂತ್ರಸ್ತ ರೈತರ ಬದುಕಿಗೆ ಪುನಶ್ಚೇತನಕ್ಕೆ ನೆರವಾಗುವ ಶ್ರೀಗಳ ಕಾರ್ಯಕ್ಕೂ ದೇಣಿಗೆಗಳು ಹರಿದುಬಂದಿದೆ.

ಕೊಲ್ಲಾಪುರ ಜಿಲ್ಲಾಡಳಿತವೂ ಸಂಗ್ರಹವಾಗಿರುವ ಪರಿಹಾರ ಸಾಮಗ್ರಿಗಳನ್ನು ಶ್ರೀಮಠದ ಮೂಲಕವೇ ಅರ್ಹ ಸಂತ್ರಸ್ತರಿಗೆ ತಲುಪಿಸಲು ನಿರ್ಧರಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಕೂಡ ಶ್ರೀಮಠದ ಸೇವಾ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ರಕ್ಷಣೆ, ಆಶ್ರಯ, ಪುನರ್ವಸತಿಗೆ ಆದ್ಯತೆ

ಶ್ರೀಮಠದ ಭಕ್ತ ಸಮೂಹವಿರುವ ನೂರಾರು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ರಕ್ಷಣೆ, ಅವರಿಗೆ ತಾತ್ಕಾಲಿಕ ಆಶ್ರಯ, ಮನೆ-ಆಸ್ತಿ ಕಳೆದುಕೊಂಡವರಿಗೆ ಪುನರ್ವಸತಿ ವಿಚಾರದಲ್ಲಿ ಕನೇರಿಮಠ ತನ್ನದೇ ಕಾಯಕದಲ್ಲಿ ತೊಡಗಿದೆ. ಪ್ರವಾಹ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಇಂಥ ಗ್ರಾಮಗಳಿಗೆ ಪರಿಹಾರ ಕಾರ್ಯಕ್ಕೆ ತೆರಳುತ್ತೇವೆ. • ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿಮಠ
• ಅಮರೇಗೌಡ ಗೋನವಾರ
Advertisement

Udayavani is now on Telegram. Click here to join our channel and stay updated with the latest news.

Next