Advertisement

ವಿಜೃಂಭಣೆಯಿಂದ ನೆರವೇರಿದ ಶ್ರೀ ಕನ್ನಂಬಾಡಿ ಅಮ್ಮನವರ ಬ್ರಹ್ಮ ರಥೋತ್ಸವ

06:53 PM Mar 08, 2022 | Team Udayavani |

ಪಿರಿಯಾಪಟ್ಟಣ: ಇತಿಹಾಸ ಪ್ರಸಿದ್ದ ಪಿರಿಯಾಪಟ್ಟಣ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕನ್ನಂಬಾಡಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತಾಧಿಗಳ ನಡುವೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

Advertisement

ಬೆಳಗ್ಗೆಯಿಂದಲೇ ದೇವಾಲಯದಲ್ಲಿ ದೇವರಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದಿದ್ದು, 10 ಗಂಟೆಯಿಂದಲೇ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಅಮ್ಮನವರಿಗೆ ಕಳಸಾರೋಹಣವನ್ನು ನೆರವೇರಿಸಲಾಯಿತು. ತದನಂತರದಲ್ಲಿ ದೇವಿಗೆ ಬಲಿಪೂಜೆ ನಡೆಯಿತು. ಇದಾದ ನಂತರ ಕನ್ನಂಬಾಡಿ ಅಮ್ಮನವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಮಾಡಿ ನಂತರ ಕೊಂಬು ಕಹಳೆ ಬ್ಯಾಂಡ್ ಸಟ್, ಮಂಗಳವಾದ್ಯಗಳ ಸಮೇತ ಬಗೆಬಗೆಯ  ಹೂವಿನಿಂದ ಸಿಂಗಾರಗೊಂಡ ರಥಕ್ಕೆ ದೇವಿಯನ್ನು ಕೂರಿಸಿ ಭಕ್ತಾದಿಗಳ ಘೋಷಣೆಯ ನಡುವೆ ಮದ್ಯಾಹ್ನ 12.10 ರೊಳಗೆ ಸಲ್ಲುವ ವೃಷಭ ಲಗ್ನದಲ್ಲಿ ರಥೋತ್ಸವ ಜರುಗಿತು. ದೇವಸ್ಥಾನದಿಂದ ಬಿ.ಎಂ.ರಸ್ತೆ ವರೆಗೆ ರಥವನ್ನು ಎಳೆಯುವ ಹಾಗೂ ರಥಕ್ಕೆ ಹಣ್ಣು ದವನ ಎಸೆಯುವ ಮೂಲಕ ಭಕ್ತಾದಿಗಳು ದೇವರಿಗೆ ಭಕ್ತಿ ಸಮರ್ಪಿಸಿದರು.

ಜಾತ್ರಾ ಮಹೋತ್ಸವಕ್ಕೆ ಪಿರಿಯಾಪಟ್ಟಣ ತಾಲೂಕಿನ ನೂರಾರು ಗ್ರಾಮಗಳ ಜನತೆ ಸೇರಿದಂತೆ ಮೈಸೂರು ಹಾಗೂ ಕೊಡಗು ಜಿಲ್ಲೆಯ ಸಾವಿರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ರಥೋತ್ಸವದ ನಿಮಿತ್ತ ಪಟ್ಟಣದ ಬಿ.ಎಂ. ರಸ್ತೆಯ ಎರಡೂ ಬದಿಗಳಲ್ಲಿ ಹಲವು ಸಂಘ ಸಂಸ್ಥೆಗಳು ಬೆಳಗ್ಗಿನಿಂದಲೇ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗಾಗಿ ಬಾತು ಮೊಸರನ್ನ, ಪಾನಕ, ಮಜ್ಜಿಗೆ, ನೀರು, ಹಣ್ಣುಗಳು ಸೇರಿದಂತೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಿದ್ದು ವಿಶೇಷವಾಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next