ಪಣಜಿ: ಗೋವಾದಲ್ಲಿ ನಾವು 4 ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದೇವೆ. ಆದರೆ ನಮ್ಮ ಮಕ್ಕಳು, ಮೊಮ್ಮಕ್ಕಳು ಕೂಡ ಕನ್ನಡ ಭಾಷೆಯನ್ನು ಉಳಿಸಿಕೊಂಡು ಹೋಗಲು ಗೋವಾದಲ್ಲಿರುವ ಎಲ್ಲ ಕನ್ನಡಿಗರು ಒಗ್ಗಟ್ಟಾಗಿ ಗೋವಾದಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಗೋವಾದಲ್ಲಿ ಹೆಚ್ಚು ಹೆಚ್ಚು ಕನ್ನಡ ಭಾಷೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಹೇಳಿದರು.
ಮಾಪ್ಸಾದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಉತ್ತರ ಗೋವಾದ ಜಿಲ್ಲಾ ಹಾಗೂ ತಾಲೋಕು ಸಮಿತಿ ಆಯ್ಕೆ ಸಭೆಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ಧಣ್ಣ ಮೇಟಿ ಮಾತನಾಡಿ ಗೋವಾದಲ್ಲಿ ಕನ್ನಡಿಗರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶಾಲೆಯಲ್ಲಿ ಜಾತಿ ಕಾಲಂ ಇಲ್ಲದಿರುವುದು ಕನ್ನಡಿಗರಿಗೆ ಹೆಚ್ಚಿನ ತೊಂದರೆಯುಂಟಾಗುವಂತಾಗಿದೆ. ಕರ್ನಾಟಕ ಹಾಗೂ ಗೋವಾ ಸರ್ಕಾರ ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಬೇಕಿದೆ. ಇಷ್ಟೇ ಅಲ್ಲದೆಯೇ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಿದ್ಧಣ್ಣ ಮೇಟಿ ಆಗ್ರಹಿಸಿದರು.
ಗೋವಾದಲ್ಲಿರುವ ಕನ್ನಡಿಗರು ಒಗ್ಗಟ್ಟಾಗಿದ್ದಾಗ ಮಾತ್ರ ಕನ್ನಡಗರ ಸಮಸ್ಯೆ ಬಗೆಹರಿಸಲು ಸಾಧ್ಯ. ನಾವು ಒಗ್ಗಟ್ಟಾಗಿದ್ದಾಗ ಮಾತ್ರ ಸರ್ಕಾರವು ನಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಲಿದೆ. ಇದರಿಂದಾಗಿ ಗೋವಾದಲ್ಲಿರುವ ಕನ್ನಡಿಗರೆಲ್ಲರೂ ಸಂಘಟನೆಗಳ ಮುಖಾಂತರ ಒಟ್ಟಾಗಿರುವ ಮೂಲಕ ಹೊರನಾಡ ಗೋವಾದಲ್ಲಿ ಕನ್ನಡ ಉಳಿಸಿ ಬೆಳೆಸಿ ಕನ್ನಡ ತಾಯಿಯ ಸೇವೆ ಮಾಡೋಣ ಎಂದರು.
ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಂಮತಪ್ಪ ಶಿರೂರ್ ಮಾತನಾಡಿ, ಗೋವಾದಲ್ಲಿ ಇಷ್ಟು ಶೀಘ್ರವಾಗಿ ಕನ್ನಡ ಸಾಹಿತ್ಯ ಪರಿಷತ್‍ನ ಎಲ್ಲ ಘಟಕಗಳ ಸ್ಥಾಪನೆಗೆ ಕನ್ನಡಿಗರು ಆಸಕ್ತಿಯಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮುಂದೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಮುಂಬರುವ ದಿನಗಳಲ್ಲಿ ಇದೇ ರೀತಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದರು.
ಮಾಪ್ಸಾ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ನಾಗರಾಜ ಗೋಂದಕರ್, ಸುರೇಶ ಕೊಟ್ಟಿಗೇರಿ, ನಿಂಗಪ್ಪಾ ಪಾಟೋಳ, ಶರಾವತಿ ಬಾಲಚಂದ್ರ ಜೋಶಿ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉತ್ತರ ಗೋವಾ ಜಿಲ್ಲಾ ಸಮಿತಿ, ತಾಲೂಕು ಸಮಿತಿಗಳ ಪದಾಧಿಕಾರಿಗಳನ್ನು ಅಧೀಕೃತವಾಗಿ ಘೋಷಿಸಲಾಯಿತು.