Advertisement
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ 1,500 ಮೀ. ಓಟದಲ್ಲಿ ಮೂಡಿಗೆರೆಯ ರಕ್ಷಿತಾ ರಾಜು ಸ್ಪರ್ಧಿಸಲಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಅವರಿಗೆ ಸ್ಪರ್ಧಿಸುವ ಅವಕಾಶ ಸಿಕ್ಕಿರಲಿಲ್ಲ. ಪ್ಯಾರಿಸ್‌ನಲ್ಲಿ ಲಭಿಸಿದ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ದಿಕ್ಕಿನಲ್ಲಿ ರಕ್ಷಿತಾ ಕನಸುಗಳ ಓಟವಿದೆ. ಪ್ಯಾರಾಲಿಂಪಿಕ್ಸ್ ನಲ್ಲಿ 1,500 ಮೀ. ಓಟದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮೊದಲ ಮಹಿಳಾ ಆ್ಯತ್ಲೀಟ್ ಎಂಬುದು ಇವರ ಹೆಗ್ಗಳಿಕೆ.
ರಕ್ಷಿತಾ ಹುಟ್ಟಿದ್ದು 2002ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುಡ್ಡದಹಳ್ಳಿಯ ಬಾಳೂರಿನಲ್ಲಿ. ಇವರಿಗೊಬ್ಬ ತಮ್ಮ ಇದ್ದಾರೆ. ಹುಟ್ಟುವಾಗಲೇ ರಕ್ಷಿತಾಗೆ ಅಂಧತ್ವವಿತ್ತು. ಹುಟ್ಟಿದ 2ನೇ ವರ್ಷದಲ್ಲಿ ತಾಯಿ ಸಾವನ್ನಪ್ಪಿದರು. 10ನೇ ವರ್ಷವಾಗುವ ವೇಳೆಗೆ ಆಸರೆಯಾಗಿದ್ದ ತಂದೆಯೂ ಕೊನೆಯುಸಿರೆಳೆದರು. ಹೀಗಾಗಿ ಅನಾಥೆಯಾಗಿದ್ದ ಮಗುವನ್ನು ಅಜ್ಜಿಯೇ ಅಕ್ಕರೆಯಿಂದ ಬೆಳೆಸಿದರು. ವಿಪರ್ಯಾಸವೆಂದರೆ, ರಕ್ಷಿತಾರನ್ನು ಬೆಳೆಸಿದ ಅಜ್ಜಿಗೆ ಕಿವಿ ಕೇಳಿಸದು, ಮಾತೂ ಬಾರದು. “ಆದರೂ ಅಜ್ಜಿ ಬಹಳ ಕಷ್ಟದಲ್ಲೇ ನನ್ನನ್ನು ಬೆಳೆಸಿದರು. ಹೆಚ್ಚಾಗಿ ಬೆಂಗಳೂರಿನಲ್ಲೇ ಇರುತ್ತೇನೆ. ಬಿಡುವಾದಾಗ ಅಪರೂಪಕ್ಕೆ ಊರಿಗೆ ತೆರಳಿ ಅಜ್ಜಿ, ತಮ್ಮ, ಚಿಕ್ಕಮ್ಮನನ್ನು ಮಾತಾಡಿಸಿ ಬರುತ್ತೇನೆ’ ಎನ್ನುತ್ತಾರೆ ರಕ್ಷಿತಾ.
Related Articles
“ನಾನೀಗ ಬೆಂಗಳೂರಿನ ಕೆಆರ್ ಪುರಂ ಸರಕಾರಿ ಕಾಲೇಜಿನಲ್ಲಿ 2ನೇ ವರ್ಷದ ಬಿಎ ಓದುತ್ತಿದ್ದೇನೆ. ಐಎಎಸ್ ಮಾಡುವ ಮಹದಾಸೆಯಿದೆ. ಶಾಲಾ ದಿನಗಳನ್ನು ಚಿಕ್ಕಮಗಳೂರಿನ ಆಶಾಕಿರಣ ಅಂಧರ ಶಾಲೆಯಲ್ಲಿ ಮುಗಿಸಿದ್ದೇನೆ. ಆದರೆ ರಾಜ್ಯದಲ್ಲಿ ಅಂಧರಿಗೆ ವಿಶೇಷ ಕಾಲೇಜುಗಳಿಲ್ಲ. ಹೀಗಾಗಿ ಸಾಮಾನ್ಯ ಕಾಲೇಜುಗಳಲ್ಲೇ ಓದಬೇಕಾಗಿದೆ. ಕಾಲೇಜು ಕಲಿಕೆಗೆ ಬ್ರೈಲ್ ಲಿಪಿಯ ಬುಕ್ಸ್ ಸಿಗುವುದು ಕಷ್ಟ. ಹೀಗಾಗಿ ನಾನು ಮೊಬೈಲ್ ಆ್ಯಪ್ ಮೂಲಕ ಪಿಡಿಎಫ್ ಸ್ಕ್ಯಾನ್ ಮಾಡಿಕೊಂಡು, ಆಲಿಸುವ ಮೂಲಕ ಓದುತ್ತೇನೆ. ಪರೀಕ್ಷೆಯ ವೇಳೆ ಸಹಾಯಕರಿರುತ್ತಾರೆ. ನಾನು ಹೇಳಿದಂತೆ ಅವರು ಬರೆಯುತ್ತಾರೆ’ ಎಂದು ರಕ್ಷಿತಾ ತಮ್ಮ ಓದಿನ ಬಗ್ಗೆ ವಿವರಿಸಿದರು.
Advertisement
ರೈಲನ್ನೇರುವ ಆಸೆಯಿಂದ ಕ್ರೀಡೆಗೆ ಬಂದೆ..“ನನಗೆ ಕ್ರೀಡೆಯಲ್ಲಿ ಸಾಧಿಸಬೇಕೆನ್ನುವ ಛಲ ಹುಟ್ಟಿಕೊಳ್ಳಲು ಮೂಲ ಕಾರಣ, ರೈಲಿನಲ್ಲಿ ಪ್ರಯಾಣಿಸಬೇಕೆನ್ನುವ ಆಸೆ. ಅಂಧರ ಶಾಲೆಯಲ್ಲಿ ಓದುತ್ತಿದ್ದಾಗ ಹೊಸದಿಲ್ಲಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡ ನನ್ನ ಸ್ನೇಹಿತರು ರೈಲು ಪ್ರಯಾಣದ ಬಗ್ಗೆ ವರ್ಣಿಸುತ್ತಿದ್ದರು. ಆಗೆಲ್ಲ ಅಜ್ಜಿಯ ಜತೆಯಲ್ಲಿ ಬಸ್ಸಿನಲ್ಲಿ ಮಾತ್ರ ಪ್ರಯಾಣಿಸಿದ್ದ ನನಗೆ ರೈಲನ್ನೇರುವ ಆಸೆ ಹುಟ್ಟಿತು. ಕ್ರೀಡಾಪಟುವಾದರೆ ರೈಲಿನಲ್ಲಿ ಸುಲಭವಾಗಿ ಸಂಚರಿಸಬಹುದು ಎಂಬ ಕಾರಣಕ್ಕೆ ನಾನು ಕ್ರೀಡೆಗೆ ಬಂದೆ. 2016ರಿಂದ ನನ್ನ ಕ್ರೀಡಾ ಬದುಕು ಆರಂಭವಾಯಿತು’ ಎಂದು ರಕ್ಷಿತಾ ತಮ್ಮ ಬದುಕಿನ ಟರ್ನಿಂಗ್ ಪಾಯಿಂಟ್ ಅನ್ನು ಬಿಚ್ಚಿಟ್ಟರು. 2022ರ ಪ್ಯಾರಾ ಏಷ್ಯಾಡ್‌ನಲ್ಲಿ ಬಂಗಾರ
2022ರ ಹ್ಯಾಂಗ್‌ಝೂ ಪ್ಯಾರಾ ಏಷ್ಯನ್ ಗೇಮ್ಸ್‌ನ 1,500 ಮೀ.ನಲ್ಲಿ ಸ್ಪರ್ಧಿಸಿದ್ದ ರಕ್ಷಿತಾ ಬೆಳ್ಳಿ ಗೆದ್ದಿದ್ದರು. ಆದರೆ ಈ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಚೀನಾದ ಸಂಶಾನ್ ಹಿ ಅನರ್ಹಗೊಂಡ ಕಾರಣ, ಬಂಗಾರದ ಪದಕ ರಕ್ಷಿತಾಗೆ ಒಲಿದಿತ್ತು. 2018ರ ಜಕಾರ್ತ ಪ್ಯಾರಾ ಗೇಮ್ಸ್‌ನಲ್ಲೂ ರಕ್ಷಿತಾ ಬಂಗಾರ ಜಯಿಸಿದ್ದರು. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್ ವೇಳೆ ಕೋವಿಡ್ ಕಾರಣದಿಂದಾಗಿ ರಕ್ಷಿತಾ ಆಯ್ಕೆ ಆಗಿರಲಿಲ್ಲ. ಆದರೆ ಈ ಬಾರಿ ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆಯಾಗಿರುವುದು ಖುಷಿ ನೀಡಿದೆ ಎಂದು ಸಂತಸ ಹಂಚಿಕೊಂಡರು. ಕೋಚ್ ಕೈಹಿಡಿದು ಓಡುತ್ತಾರೆ
ಕಣ್ಣಿಲ್ಲದಿದ್ದರೂ ಓಡುತ್ತೇನೆ ಎಂದು ಹೊರಡುವುದು ಒಂದು ರೀತಿಯಲ್ಲಿ ಹುಂಬತನದ ನಿರ್ಧಾರ. ಆದರೆ ಇಲ್ಲಿ ಬೆನ್ನಿಗೊಬ್ಬರು ನೆರವಿಗಿರುತ್ತಾರೆ. ರಕ್ಷಿತಾ ಸಾಧನೆಗೆ ಅವರ ಬೆನ್ನ ಹಿಂದಿನ ಶಕ್ತಿಯಾಗಿ ಸಾಯ್ ತರಬೇತುದಾರ ರಾಹುಲ್ ಬಾಲಕೃಷ್ಣ ಎಂಬುವವರಿದ್ದಾರೆ. ಕ್ರೀಡಾಕೂಟಗಳಿಗೆ ಓಡಾಟದ ವೇಳೆ ನೆರವು ನೀಡುವ ರಾಹುಲ್, ಸ್ಪರ್ಧೆಯ ವೇಳೆಯೂ ಗೈಡ್ ಆಗಿ ರಕ್ಷಿತಾ ಅವರ ಜತೆಗೆ ಓಡುತ್ತಾರೆ. ಟಿಟ್ಟರ್ ಎನ್ನುವ ಸಾಧನದ ಒಂದು ತುದಿಯನ್ನು ಕೋಚ್ ಹಿಡಿದಿರುತ್ತಾರೆ, ಅದರ ಇನ್ನೊಂದು ತುದಿಯನ್ನು ಹಿಡಿದುಕೊಂಡು ರಕ್ಷಿತಾ ಓಡುತ್ತಾರೆ. · ಎಸ್. ಸದಾಶಿವ