Advertisement

ಕಾಲೇಜುಗಳಲ್ಲಿ ಕನ್ನಡಿಗರಿಗೆ ಕೆಲಸ ಕಡ್ಡಾಯ

06:00 AM Dec 19, 2018 | Team Udayavani |

ಬೆಂಗಳೂರು: ಡಾ| ಸರೋಜಿನಿ ಮಹಿಷಿ ವರದಿ ಶಿಫಾರಸಿನಂತೆ ರಾಜ್ಯದ ಖಾಸಗಿ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಇನ್ನು ಮುಂದೆ ವಿವಿಧ ಹುದ್ದೆಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಕನ್ನಡಿಗರನ್ನು ಕಡ್ಡಾಯವಾಗಿ ನೇಮಿಸಿ ಕೊಳ್ಳಬೇಕು. ರಾಜ್ಯದಲ್ಲಿ 202 ಖಾಸಗಿ ಎಂಜಿನಿಯರಿಂಗ್‌ ಹಾಗೂ 196 ಖಾಸಗಿ ಪಾಲಿಟೆಕ್ನಿಕ್‌ ಕಾಲೇಜುಗಳು ಅಸ್ತಿತ್ವದಲ್ಲಿವೆ. ಗ್ರಾಮೀಣ ಭಾಗದಲ್ಲಿರುವ ಖಾಸಗಿ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳ ನಾನಾ ಹುದ್ದೆಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಸರಕಾರದ ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿ ಕಾರಿಯೊಬ್ಬರು ಮಾಹಿತಿ ನೀಡಿ ದ್ದಾರೆ. ವರದಿ ಶಿಫಾರಸಿನಂತೆ “ಎ’ ವೃಂದದ ಹುದ್ದೆಗಳಲ್ಲಿ ಶೇ.65 ಕನ್ನಡಿಗರಿಗೆ ಮೀಸಲಿಡಬೇಕು. ಇದರನ್ವಯ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲರು, ಸಹ ಪ್ರಾಧ್ಯಾಪಕರು, ಅಕಾಡೆಮಿಕ್‌ ಸದಸ್ಯ, ವಿಭಾಗದ ಮುಖ್ಯಸ್ಥರು, ವರ್ಕ್‌ ಶಾಪ್‌ ಸೂಪರಿಂಟೆಂಡೆಂಟ್‌ ಹಾಗೂ ಆಡಳಿತಾಧಿಕಾರಿ ಕನ್ನಡಿಗರೇ ಆಗಿರಬೇಕು. ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಪ್ರಾಂಶು ಪಾಲರು ಮತ್ತು ಆಡಳಿತಾಧಿಕಾರಿ ಹುದ್ದೆಯನ್ನು ಕನ್ನಡಿಗರಿಗೆ ಮೀಸಲಿಡಬೇಕು ಎಂದು ಸೂಚನೆ ನೀಡಿದೆ.

“ಬಿ’ ಗ್ರೂಪ್‌ ಹುದ್ದೆಗಳಲ್ಲಿ ಶೇ.80ರಷ್ಟು ಹುದ್ದೆ ಕನ್ನಡಿಗರಿಗೆ ನೀಡಬೇಕು. ಎಂಜಿನಿಯ ರಿಂಗ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ವರ್ಕ್‌ಶಾಪ್‌ ಸೂಪರಿಂಟೆಂಡೆಂಟ್‌, ಫೋರ್‌ಮನ್‌, ಕುಲಸಚಿವರು, ಸಿಸ್ಟಂ ಅನಾಲಿಸ್ಟ್‌, ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕರು, ಕುಲಸಚಿವರು ಮತ್ತು ಫೋರ್‌ಮನ್‌ ಹುದ್ದೆಯನ್ನು ಕನ್ನಡಿಗರಿಗೆ ನೀಡಬೇಕಿದೆ.

“ಸಿ’ ವೃಂದದ ಹುದ್ದೆಗಳಲ್ಲಿ ಶೇ.100ರಷ್ಟು ಕನ್ನಡಿಗರನ್ನು ನೇಮಿಸಿಕೊಳ್ಳಬೇಕು. ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜಿನ ಕಚೇರಿ ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ಶೀಘ್ರ ಲಿಪಿಗಾರರು, ಬೋಧಕರು, ಸಹಬೋಧಕರು ಮತ್ತು ಮೆಕಾನಿಕ್‌ಗಳು ಕನ್ನಡದವರೇ ಆಗಿರಬೇಕು. ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ “ಡಿ’ ದರ್ಜೆಯ ಹುದ್ದೆಗಳಲ್ಲಿ ಕಚೇರಿ ಸಹಾಯಕ, ಸೇವಕ, ಸ್ವೀಪರ್‌ (ಕಸಗುಡಿಸುವವರು) ಮತ್ತು ಕಾವಲುಗಾರರ ಹುದ್ದೆಯನ್ನೂ ಕಡ್ಡಾಯವಾಗಿ ಕನ್ನಡಿಗರಿಗೇ ನೀಡಬೇಕು.

ಅರ್ಹ ಕನ್ನಡಿಗರು ಯಾರು?
ಕನ್ನಡ ಓದಲು ಅಥವಾ ಬರೆಯಲು ಬಲ್ಲವರನ್ನು ಆಯ್ಕೆ ಮಾಡಿಕೊಂಡು ಕನ್ನಡಿಗರು ಎಂದು ಹೇಳಲು ಸಾಧ್ಯವಿಲ್ಲ. ಸರೋಜಿನಿ ಮಹಿಷಿ ವರದಿ ಶಿಫಾರಸಿನಂತೆ ಇಲಾಖೆ ನೀಡಿರುವ ಮಾನದಂಡದ ಪ್ರಕಾರ ಕನ್ನಡ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಹಾಗೂ ಕನ್ನಡವನ್ನು ಚೆನ್ನಾಗಿ ಆಲಿಸಿ ಅರ್ಥಮಾಡಿಕೊಳ್ಳಬಲ್ಲರಿಗೆ ಹುದ್ದೆಗಳನ್ನು ನೀಡಬೇಕು ಎಂದು ತಿಳಿಸಿದೆ.

Advertisement

ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ
ಡಿ.22ರೊಳಗಾಗಿ ಸಂಸ್ಥೆಯ ನೌಕರರ ವರ್ಗದ ಮಾಹಿತಿಯನ್ನು ಕಡ್ಡಾಯವಾಗಿ ತಾಂತ್ರಿಕ ಶಿಕ್ಷಣ ಇಲಾಖೆಗೆ ನೀಡಬೇಕು. ನಿಯಮ ಉಲ್ಲಂ ಸುವ ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಾನುಮೋದನೆ ಮತ್ತು ವಾರ್ಷಿಕ ಸಂಯೋಜನೆಯನ್ನು ತಡೆ ಹಿಡಿಯಲಾಗುತ್ತದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಎಲ್ಲ ಖಾಸಗಿ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next