Advertisement

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ:ಶ್ರದ್ಧಾಂಜಲಿ ಸಭೆ

10:45 AM Oct 25, 2017 | |

ಮುಂಬಯಿ: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ವತಿಯಿಂದ ಶ್ರದ್ಧಾಂಜಲಿ ಸಭೆಯು ಅ. 6ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಜರಗಿತು. ಸೆ. 29ರಂದು ಎಲ್ಫಿನ್‌ಸ್ಟನ್‌ ರೈಲ್ವೇ ನಿಲ್ದಾಣದ ಬ್ರಿಡ್ಜ್ನಲ್ಲಿ  ಸಂಭವಿಸಿದ ಭೀಕರ ಕಾಲು¤ಳಿತದಿಂದ ದುರಂತ ಸಾವನ್ನಪ್ಪಿರುವ ತುಳು-ಕನ್ನಡಿಗರಾದ ಸುಮಲತಾ ಶೆಟ್ಟಿ ಮತ್ತು ಸುಜಾತಾ  ಆಳ್ವ ಹಾಗೂ ಇತ್ತೀಚೆಗೆ ಅನಾರೋಗ್ಯದಿಂದ ಸಾವನ್ನಪ್ಪಿರುವ ಕಲಾವಿದ ತಾರಾ ರಾವ್‌ ಅವರಿಗೆ ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಸುರೇಂದ್ರ ಕುಮಾರ್‌ ಹೆಗ್ಡೆ ಅವರು ಮಾತನಾಡಿ, ಇಷ್ಟೊಂದು ಸಂಖ್ಯೆಯಲ್ಲಿ ತುಳು-ಕನ್ನಡಿಗರು ಇಲ್ಲಿ ಸೇರಿರುವುದರಿಂದ ಅಗಲಿದವರ ವ್ಯಕ್ತಿತ್ವ ಹೇಗಿತ್ತು ಎಂಬುದು ಅರ್ಥವಾಗುತ್ತದೆ. ತಾರಾ ರಾವ್‌ ಅವರು ಆನಾರೋಗ್ಯದಿಂದ ಸಾವನ್ನಪ್ಪಿದ್ದು, ಯಕ್ಷಗಾನ ಕಲಾವಿದೆಯಾಗಿ, ಸಂಘಟಕಿಯಾಗಿ, ನೃತ್ಯ ನಿರ್ದೇಶಕಿಯಾಗಿ, ರಂಗಭೂಮಿ ಕ್ಷೇತ್ರದಲ್ಲಿ ಅವರು ಸಾಧಿಸಿರುವ ಸಾಧನೆ ಅಪಾರವಾಗಿದೆ. ಸುಜಾತಾ ಮತ್ತು ಸುಮಲತಾ ಅವರು ಆತ್ಮೀಯ ಗೆಳೆಯರಾಗಿದ್ದವರು. ಸುಜಾತಾ ಆಳ್ವರು ಹಲವಾರು ನಾಟಕಗಳಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದವರು. ಇವರಿಬ್ಬರ ಸಾವು ಹಲವಾರು ಸಂಘ-ಸಂಸ್ಥೆಗಳಿಗೆ, ಮುಂಬಯಿ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ. ಸುಜಾತಾ ಆಳ್ವರು ಶ್ರೀಮಂತ ಮನೆತನದಿಂದ ಬಂದವರಲ್ಲ. ಈರ್ವರು ಹೆಣ್ಮಕ್ಕಳು ಬಹಳ ಕಷ್ಟದಿಂದ ತನ್ನ ಸಂಸಾರವನ್ನು ಮುಂಬಯಿಯಂತಹ ನಗರದಲ್ಲಿ ಸಾಗಿಸು ತ್ತಿದ್ದರು. ಅವರ ಹಾಗೂ  ನಗರದಲ್ಲಿ ಯಕ್ಷಗಾನದ ಪ್ರಗತಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಚಂದ್ರಹಾಸ ಸುವರ್ಣರ ಪರಿವಾರಕ್ಕೂ ಪರಿಷತ್ತಿನ ವತಿಯಿಂದ ಸಹಾಯಹಸ್ತ ನೀಡುವುದರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಅಗಲಿದ ಇವರ ಆತ್ಮಗಳಿಗೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ನುಡಿದು ನುಡಿ-ನಮನ ಸಲ್ಲಿಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಮಾತನಾಡಿ, ಈ ದುರಂತವನ್ನು ಯಾರು ನಂಬುವಂತಿಲ್ಲ. ಇಂತಹ ದುರಂತ ಭವಿಷ್ಯದಲ್ಲಿ ನಡೆಯಬಾರದೆಂದು ದೇವರಲ್ಲಿ ಪ್ರಾರ್ಥಿಸುವ ಎಂದರು.

ಮಹಾರಾಷ್ಟ್ರ ಕಲಾವಿದರ ಪರಿಷತ್ತಿನ ಸ್ಥಾಪಕಾಧ್ಯಕ್ಷ ಎಸ್‌. ಟಿ. ವಿಜಯ ಕುಮಾರ್‌ ಮಾತನಾಡಿ, ವಿಧಿ ನಿಯಮವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ನಮ್ಮ ಕಲಾವಿದರನ್ನು ನಾವು ಕಳೆದುಕೊಂಡಿದ್ದೇವೆ ಎಂಬ ನೋವು ನಮಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದರು.

ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಕಾಲನ ಕರೆಗೆ ಯಾರನ್ನೂ ನಿಲ್ಲಿಸಲು ಸಾಧ್ಯವಿಲ್ಲ. ಲವಲವಿಕೆಯಿಂದ ರಂಗ ಸೇವೆ ಮಾಡುವ ಕಲಾವಿದೆಯರನ್ನು ಕಳಕೊಂಡ ಮುಂಬಯಿ ರಂಗಭೂಮಿ ಬರಿದಾಗಿದೆ. ಈ ದುರಂತದಿಂದ ಕೆಲವೊಮ್ಮೆ ಸಂಯಮವಾಗಿರಲು ಕಲಿಯಬೇಕು ಎಂದು ನುಡಿದರು. ಕಂಠ ಧ್ವನಿ ಕಲಾವಿದ ಜಯಶೀಲ ಸುವರ್ಣ, ಸಂಘಟಕ ಜಿ. ಟಿ. ಆಚಾರ್ಯ, ಮುಂಬಯಿ ಆಕಾಶವಾಣಿ ಕನ್ನಡ ವಿಭಾಗದ ಸುಶೀಲಾ ಎಸ್‌. ದೇವಾಡಿಗ, ರಂಗನಿರ್ದೇಶಕ ರಮೇಶ್‌ ಶಿವಪುರ, ಗೋರೆಗಾಂವ್‌ ಕರ್ನಾಟಕ ಸಂಘದ ರಂಗಸ್ಥಳ ವಿಭಾಗದ ನಿರ್ದೇಶಕಿ ವಾಣಿ ಶೆಟ್ಟಿ, ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ಅಧ್ಯಕ್ಷ  ನವೀನ್‌ ಶೆಟ್ಟಿ ಇನ್ನಬಾಳಿಕೆ, ರಂಗ ಕಲಾವಿದ ನವೀನ್‌ ಬೇಂಗ್ರೆ, ಕಲಾ ಸೌರಭದ ಪದ್ಮನಾಭ ಸಸಿಹಿತ್ಲು, ಮುಂಬಯಿ ರಂಗಭೂಮಿ ಕ್ಷೇತ್ರದ ಕಲಾವಿದರು, ಕಲಾವಿದೆಯರು, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಜತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದು ಮೃತರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ನುಡಿನಮನ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next