Advertisement
ಕನ್ನಡಕುದ್ರುವಿನಿಂದ 5 -6 ವರ್ಷಗಳ ಹಿಂದೆ ಹೆಮ್ಮಾಡಿ ಅಥವಾ ಕುಂದಾಪುರಕ್ಕೆ ಸಂಪರ್ಕ ಸಾಧ್ಯವಾಗಬೇಕಾದರೆ ದೋಣಿಯೇ ಆಧಾರವಾಗಿತ್ತು. ಬಹು ವರ್ಷಗಳ ಬೇಡಿಕೆ ಬಳಿಕ 2016ರಲ್ಲಿ ದ್ವೀಪವಾಸಿಗಳ ಸೇತುವೆಯ ಕನಸು ಈಡೇರಿತ್ತು. ಆದರೆ ಕನ್ನಡಕುದ್ರುವಿನಿಂದ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯು ಹಲವು ವರ್ಷಗಳಿಂದ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ.
Related Articles
Advertisement
ಕನ್ನಡಕುದ್ರುವಿನಿಂದ ರಾಷ್ಟ್ರೀಯ ಹೆದ್ದಾರಿಯ ಮೂವತ್ತುಮುಡಿಗೆ ಸಂಪರ್ಕ ಕಲ್ಪಿಸುವ 8.50 ಕೋ.ರೂ. ವೆಚ್ಚದಲ್ಲಿ 200 ಮೀ. ಉದ್ದ ಹಾಗೂ 7.5 ಮೀ. ಅಗಲದ ಸೇತುವೆ ನಿರ್ಮಾಣಗೊಂಡಿತ್ತು. ಮೂವತ್ತುಮುಡಿ ಬಳಿಯ ಹೆದ್ದಾರಿಯಿಂದ ಕನ್ನಡಕುದ್ರುವಿನ ಕೊನೆಯಲ್ಲಿ ಇರುವ ಮನೆಗಳಿಗೆ ಸುಮಾರು 2 ಕಿ.ಮೀ. ದೂರವಿದೆ. ಈ ಪೈಕಿ ಹೆದ್ದಾರಿಯಿಂದ ಸೇತುವೆಯವರೆಗಿನ ರಸ್ತೆಗೆ ಈಗಾಗಲೇ ಡಾಮರು ಕಾಮಗಾರಿಯಾಗಿದೆ. ಅಲ್ಲಿಂದ ಮುಂದಕ್ಕೆ ಮಾತ್ರ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. 100 ಎಕರೆ ವಿಸ್ತೀರ್ಣವಿರುವ ಈ ಕನ್ನಡಕುದ್ರುವಿನಲ್ಲಿ 61 ಕುಟುಂಬಗಳು ನೆಲೆಸಿವೆ. ನಿತ್ಯ ನೂರಾರು ಮಂದಿ ಈ ಮಾರ್ಗದಲ್ಲಿ ಸಂಚರಿಸುತ್ತಾರೆ.
ತುಂಬಾ ಸಮಸ್ಯೆ:
ಕನ್ನಡಕುದ್ರುವಿನ ಗ್ರಾಮಸ್ಥರು ಈ ಹದಗೆಟ್ಟ ರಸ್ತೆಯಿಂದಾಗಿ ಸಂಕಷ್ಟಪಡುತ್ತಿದ್ದು, ಈ ರಸ್ತೆಗೆ ಡಾಮರು ಕಾಮಗಾರಿ ಅಥವಾ ಕಾಂಕ್ರೀಟ್ ಕಾಮಗಾರಿ ಮಾಡಿದಲ್ಲಿ ಅನುಕೂಲವಾಗಲಿದೆ. ಇದು ಕುದ್ರು ಆಗಿರುವುದರಿಂದ ಕಾಂಕ್ರೀಟ್ ಕಾಮಗಾರಿ ಮಾಡಿದಲ್ಲಿ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರಬಹುದು. ಈ ಬಗ್ಗೆ ಗ್ರಾಮಸಭೆಯಲ್ಲಿಯೂ ಗಮನಸೆಳೆದಿದ್ದು, ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ. – ರಾಘವೇಂದ್ರ ಪೂಜಾರಿ, ಹೆದ್ದಾರಿಮನೆ, ಸ್ಥಳೀಯ ಗ್ರಾ.ಪಂ.ಸದಸ್ಯರು
ಪ್ರಸ್ತಾವನೆ ಸಲ್ಲಿಕೆ:
ಈ ಕನ್ನಡಕುದ್ರು ರಸ್ತೆಯ ಅಭಿವೃದ್ಧಿಗೆ ಪಂಚಾಯತ್‌ನಿಂದ ಅಷ್ಟೊಂದು ಅನುದಾನ ಇಲ್ಲದಿರುವುದರಿಂದ, ಈ ಬಗ್ಗೆ ಈಗಾಗಲೇ ಗ್ರಾ.ಪಂ.ನಿಂದ ಶಾಸಕರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆಗಾಗಿ ಜಿಲ್ಲಾಧಿಕಾರಿಗಳಿಗೂ ಸದ್ಯದಲ್ಲೇ ಮನವಿ ಸಲ್ಲಿಸಲಾಗುವುದು. – ಸತ್ಯನಾರಾಯಣ, ಅಧ್ಯಕ್ಷರು, ಹೆಮ್ಮಾಡಿ ಗ್ರಾ.ಪಂ.